ಹುಣಸೂರು ತಾಲೂಕು ಶೆಟ್ಟಳ್ಳಿ ಗಿರಿಜನಾ ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಟ್ರಸ್ಟ್ ಮುಖ್ಯಸ್ಥ ಅನಂತ, ಮುಖ್ಯಶಿಕ್ಷಕ ಶಿವಕುಮಾರ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  
ಜಿಲ್ಲೆ

ಮಕ್ಕಳ ಹಕ್ಕುಗಳನ್ನು ಕಸಿಯದಿರಿ


ಬಾಲ್ಯ ಟ್ರಸ್ಟ್ ಮುಖ್ಯಸ್ಥ ಅನಂತ ಮನವಿ


ಹುಣಸೂರು: ಮಕ್ಕಳ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಬಾರದು ಎಂದು ಬಾಲ್ಯ ಟ್ರಸ್ಟ್ ಮುಖ್ಯಸ್ಥ ಅನಂತ ಅಭಿಪ್ರಾಯಪಟ್ಟರು.

ಬಾಲ್ಯ ಟ್ರಸ್ಟ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಶೆಟ್ಟಳ್ಳಿ ಗಿರಿಜನ ಆಶ್ರಮ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಬದುಕುವ, ಬೆಳವಣಿಗೆ ಹೊಂದುವ, ಭಾಗವಹಿಸುವ ಮತ್ತು ರಕ್ಷಣೆ ಜನ್ಮಸಿದ್ಧ ಹಕ್ಕಾಗಿದೆ. ಈ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ಬಗ್ಗೆ ಆಗಾಗ್ಗೆ ಮನದಟ್ಟು ಮಾಡುವುದು ಅತ್ಯವಶ್ಯಕ. ಇದನ್ನು ತಿಳಿದುಕೊಳ್ಳುವುದರಿಂದ ಮಕ್ಕಳಲ್ಲಿ ಸಾಮಾಜಿಕ ಪೌರಪ್ರಜ್ಞೆ ಬೆಳೆಯುತ್ತದೆ ಎಂದು ಹೇಳಿದರು.

ಮಕ್ಕಳು ತೊಂದರೆಗೆ ಸಿಲುಕಿದಾಗ 1098ಕ್ಕೆ ಕರೆ ಮಾಡಬಹುದು. ಪೊಲೀಸರು ಮತ್ತು ಆಯಾ ತಾಲೂಕಿನ ಶಿಶು ಸಂರಕ್ಷಾಣಾಧಿಕಾರಿಗೆ, ಹತ್ತಿರದ ಗ್ರಾಪಂ ಸದಸ್ಯರು, ಶಿಕ್ಷಕರಿಗೆ ವಿಷಯ ಮುಟ್ಟಿಸುವುದರಿಂದ ಕಷ್ಟಕ್ಕೆ ಸಿಲುಕಿದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

2000 ಮಕ್ಕಳಿಗೆ ಅರಿವು: ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ಈ ಕುರಿತಾದ ಅರಿವು ಕಾರ್ಯಕ್ರಮವನ್ನು ಬಾಲ್ಯ ಟ್ರಸ್ಟ್ 3 ತಿಂಗಳಿಂದ ಸತತವಾಗಿ ಹಮ್ಮಿಕೊಂಡಿದೆ. ತಾಲೂಕಿನ ವೀರನಹೊಸಹಳ್ಳಿ, ನಲ್ಲೂರು ಪಾಲಾ, ಕೊಳವಿಗೆ, ಶೆಟ್ಟಹಳ್ಳಿ, ನೇರಳಕುಪ್ಪೆ, ನಂಜನಗೂಡು ತಾಲೂಕಿನ ನಾಗಾಣಾಪುರ ಹಾಗೂ ವೆಂಕಟಗಿರಿ ಕಾಲನಿ ಆಶ್ರಮ ಶಾಲೆ, ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ, ಉದ್ಬೂರು, ಮೇಟಿಕುಪ್ಪೆ, ಕೆಬ್ಬೇಪುರ, ಮಟಕೆರೆ, ಬಸವನಗಿರಿ ಹಾಡಿ, ಪೆಂಜಳ್ಳಿ, ಭೀಮನಹಳ್ಳಿ ಆಶ್ರಮ ಶಾಲೆಗಳು, ಪಿರಿಯಾಪಟ್ಟಣ ತಾಲೂಕಿನ ಅಬ್ಬಳತಿ, ರಾಣಿಗೇಟ್ ಆಶ್ರಮ ಶಾಲೆ ಹಾಗೂ ಬೂದಿತಿಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.

ಆಶ್ರಮ ಶಾಲೆ ಮುಖ್ಯಶಿಕ್ಷಕ ಶಿವಕುಮಾರ್, ಸಹಶಿಕ್ಷಕರಾದ ಕೆ.ಎಸ್.ರಾಜು, ಮೈತ್ರಿ, ಶಿವಣ್ಣ, ಯೋಗೇಶ್, ಬಾಲ್ಯ ಟ್ರಸ್ಟ್ ಸ್ವಯಂ ಸೇವಕರಾದ ಹರೀಶ್‌ಕುಮಾರ್, ಮಲೈಕಾ ಹಾಜರಿದ್ದರು.