ಬೆಂಗಳೂರು ಗ್ರಾಮಾಂತರ: ಮಕ್ಕಳು ಬಾಲ್ಯವನ್ನು ಅನುಭವಿಸುವ ಹಕ್ಕನ್ನು ಯಾರೂ ಕಸಿಯಬಾರದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕರ ಯೋಜನೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಸಮೀಕ್ಷೆ ಕೈಗೊಳ್ಳುವ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸದೆ, ಬಾಲ ಕಾರ್ಮಿಕರ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಕರೆ ನೀಡಿದರು.
ಬಡತನ, ವಲಸೆ, ಅನಕ್ಷರತೆ ಮುಂತಾದ ಕಾರಣಗಳಿಂದ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ. ಈ ಪದ್ಧತಿ ನಿರ್ಮೂಲನೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲಾಗಿದ್ದು, 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಂಡಲ್ಲಿ ಕಠಿಣ ಕ್ರಮ ಕೈಗೊಂಡು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದರು.
ಬಾಲ ಕಾರ್ಮಿಕರ ರಕ್ಷಣೆಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಎಲ್ಲಿಯಾದರೂ ಬಾಲಕಾರ್ಮಿಕರು ಇರುವ ಬಗ್ಗೆ ಮಾಹಿತಿ ಬಂದರೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಪ್ರಮಾಣವಚನ ಬೋಧಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮು ಜೋಗಿಹಳ್ಳಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬಾರಾವ್ ಮತ್ತಿತರರಿದ್ದರು.