ಜಿಲ್ಲೆ

ಮಕ್ಕಳ ಸುರಕ್ಷತಾ ಸಮಿತಿ ಕಡ್ಡಾಯ

ಚಿತ್ರದುರ್ಗ; ಮಕ್ಕಳ ರಕ್ಷಣಾ ನೀತಿ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಯತ್ನಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪಗ್ರತಿ ಪರಿಶೀಲಿಸಿ ಮಾತನಾಡಿ, ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು ಎಂದರು.

ಪ್ರತಿ ಶಾಲೆಗಳಲ್ಲೂ ಸಮಿತಿ, ಮಕ್ಕಳ ಸಹಾಯ ಗುಂಪಿರಬೇಕು. ದೂರು ಪಟ್ಟಿಗೆಗಳನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಇಡಬೇಕು. ಖಾಸಗಿ ಶಾಲೆಗಳ ಪ್ರಾರಂಭಕ್ಕೂ ಮುನ್ನ ಆಡಳಿತ ಮಂಡಳಿಗಳು ಮಕ್ಕಳ ರಕ್ಷಣಾ ಬದ್ಧ್ದತೆಯ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯ. ಮಕ್ಕಳ ರಕ್ಷಣಾ ಸಮಿತಿ ಖಾಸಗಿ ಶಾಲೆಗಳ ಪರಿಶೀಲನೆಗೆ ತೆರಳಿದಾಗ ಸಹಕಾರ ನೀಡಬೇಕು. ಶಾಲೆಗಳಲ್ಲಿ ಪೋಕ್ಸೋ ಕುರಿತು ಕಾರ್ಯಾಗಾರ ಆಯೋಜಿಸಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆಯೂ ಅರಿವು ಮೂಡಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕೃಷಿ ಹೊಂಡಗಳಿಗೆ ಬಿದ್ದು 328 ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಸಂಖ್ಯೆ 1098 ಹಾಗೂ 112ನ್ನು ಸಾರ್ವಜನಿಕರಿಗೆ ಗೋಚರಿಸುವಂತೆ ಸೂಕ್ತ ಸ್ಥಳದಲ್ಲಿ ಬರೆಸಬೇಕೆಂದು ಸೂಚಿಸಿದರು.

ಜಿಲ್ಲೆಯ ಮಕ್ಕಳ ರಕ್ಷಣಾ ವ್ಯವಸ್ಥೆ ಉತ್ತಮವಾಗಿದೆ. ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ. ಸಂಕಷ್ಟದಲ್ಲಿರುವ ಬಹಳಷ್ಟು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಮಾತನಾಡಿ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದಲ್ಲಿ ಹೆಚ್ಚಿನದಾಗಿರುವ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕಾರ್ಯಪಡೆ ನೇಮಿಸಲಾಗಿದೆ. ಪೋಕ್ಸೋ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಡಿಎಚ್‌ಒ ಡಾ.ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣುಮಕ್ಕಳು ಗರ್ಭಧರಿಸಿರುವ 209 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಆರೊಗ್ಯ ಇಲಾಖೆಯಿಂದ ಗುರುತಿಸಿರುವ ಪ್ರಕರಣಗಳ ಸಹಿತ 269 ಬಾಲ್ಯವಿವಾಹ ಪ್ರಕರಣ ದಾಖಲಾಗಿವೆ. 94 ಪೋಕ್ಸೋ ಪ್ರಕರಣಗಳಲ್ಲಿ 1 ಸುಳ್ಳಾಗಿದೆ ಎಂದು ಎಎಸ್‌ಪಿ ಎಚ್.ಜೆ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಾಧಿಕಾರಿ ಸವಿತಾ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಬಿಸಿಎಂ ಜಿಲ್ಲಾಧಿಕಾರಿ ಸುಬ್ರಾನಾಯ್ಕಾ ಮತ್ತಿತರರು ಇದ್ದರು.