ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ. 25, 26ರಂದು ಇಲ್ಲಿನ ಆಲೂರ ವೆಂಕಟರಾವ್ ಸಭಾಭವನದಲ್ಲಿ 4ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಜೀವ ದುಮಕನಾಳ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಪರಿಸರವಾದಿ ಸಿ.ಎನ್. ಅಶೋಕ ರಾಷ್ಟ್ರ ಧ್ವಜಾರೋಹಣ, ವಿಜಯಕುಮಾರ ಕರಿಕಟ್ಟಿ ಪರಿಷತ್ ಧ್ವಜಾರೋಹಣ ನೆವೇರಿಸುವರು. 9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಸುಪ್ರಿಯಾ ಹೆಳವರ್, ಸರ್ವಾಧ್ಯಕ್ಷರಾಗಿ ಸುನಿಧಿ ತೊರವಿ ಹಾಗೂ ಸಹ ಅಧ್ಯಕ್ಷರಾಗಿ ನಿಖಿಲ್ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಧ್ಯಾಹ್ನ 3 ಗಂಟೆಗೆ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಸಮ್ಮೇಳನ ಉದ್ಘಾಟಿಸುವರು. ಸಾಹಿತಿ ಕೆ.ಎಚ್. ನಾಯಕ ಪುಸ್ತಕ ಬಿಡುಗಡೆ ಮಾಡುವರು. ವಿಶೇಷ ಆಹ್ವಾನಿತರಾಗಿ ಬಾಳಣ್ಣ ಶೀಗಿಹಳ್ಳಿ, ಡಾ. ಲಿಂಗರಾಜ ಅಂಗಡಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಶರಣಪ್ಪ ಕೊಟಗಿ, ಗಿರೀಶ ಪದಕಿ, ಎಸ್.ಎಸ್. ಕೆಳದಿಮಠ, ಡಾ. ಎಚ್.ಎಚ್. ಕುಕನೂರ, ಭಾರತಿ ಶೆಟ್ಟಿ, ಇತರರು ಆಗಮಿಸುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ. 26ರಂದು ಬೆಳಗ್ಗೆ 8.30ಕ್ಕೆ ಸ್ಪರ್ಧೆ ವಿಜೇತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ದತ್ತಿ ಪುರಸ್ಕಾರ ನಡೆಯಲಿದೆ. ಬಳಿಕ ನಡೆಯುವ ಕವಿ ಗೋಷ್ಠಿಯಲ್ಲಿ 15ಕ್ಕೂ ಹೆಚ್ಚುಗಳು ಕವಿಗಳು ಭಾಗವಹಿಸಲಿದ್ದು, ಅಕ್ಬರಲಿ ಸೋಲಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಚಾರ ಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಅಖಂಡ ಧಾರವಾಡ ಜಿಲ್ಲೆ ಕೊಡುಗೆ ಕುರಿತು ಡಾ. ರಾಜೇಂದ್ರ ಗಡಾದ, ರಂಗಭೂಮಿಯಲ್ಲಿ ಮಕ್ಕಳು ಕುರಿತು ವೆಂಕಟೇಶ ಈಡಿಗೇರ ಮಾತನಾಡುವವರು. ನಂತರದಲ್ಲಿ ವಿಚಾರಗೋಷ್ಠಿ, ಪರಿಷತ್ ಪದಾಧಿಕಾರಿಗಳೊಂದಿಗೆ ಮ್ಕಕಳ ಸಂವಾದ, ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಅಕ್ಬರಅಲಿ ಸೋಲಾಪುರ, ಜಯಲಕ್ಷ್ಮೀ ಎಚ್., ಅನಿತಾ ಬೇಲೂರ, ವಿಜಯಕುಮಾರ ಕರಿಕಟ್ಟಿ, ನಂದಕುಮಾರ ದ್ಯಾಪುರ, ಸುಪ್ರಿಯಾ ಹೆಳವರ, ಸುನಿಧಿ ತೊರವಿ, ಸಾಕ್ಷಿ ದೇವರೂಪಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.