ಹಾಸನ: ನಮ್ಮ ಸಾಧನೆಯೇ ಪೋಷಕರಿಗೆ ನಾವು ನೀಡುವ ಬಹುದೊಡ್ಡ ಕೊಡುಗೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಿಜಿಎಸ್ ಪಿಯು ಕಾಲೇಜಿನ ಸ್ವಾಗತೋತ್ಸವ-2024 ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಆಶೀರ್ವಚನ ನೀಡಿದ ಅವರು,ವಿದ್ಯಾರ್ಥಿ ಜೀವನವನ್ನು ಸುಲಭವಾಗಿ ಪರಿಗಣಿಸಬೇಡಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಕಲಿತರೂ ಸಾಲದು. ಅಧ್ಯಯನಶೀಲರಾಗಿ ಕೌಶಲ್ಯ,ಜ್ಞಾನ ಬೆಳೆಸಿಕೊಂಡು ನಮ್ಮ ಸ್ಥಾನವನ್ನು ನಾವು ಕಂಡುಹಿಡಿದುಕೊಳ್ಳದಿದ್ದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಬದುಕು ರೂಪಿಸುವ ವಿದ್ಯಾರ್ಥಿ ಜೀವನದಲ್ಲಿ ಸೋತರೆ ಜೀವನದುದ್ದಕ್ಕು ಕಷ್ಟದ ಹಾದಿಯಲ್ಲಿ ಕ್ರಮಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪೋಷಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಉಣ ಬಡಿಸಬೇಕು.ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯುವುದಿಲ್ಲ ತಮ್ಮ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು ಜೊತೆಗೆ ಅವರಿಗೆ ನಡೆ-ನುಡಿಯ ಬಗೆಗೆ ಮಾರ್ಗದರ್ಶನ ಮಾಡಬೇಕು ಆಗ ಮಾತ್ರ ವಿದ್ಯಾರ್ಥಿಗಳು ಈ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ಹೇಮಚಂದ್ರ ಮಾತನಾಡಿ,ಕಷ್ಟಕರವಾದ ಹಾದಿ ನಮ್ಮನ್ನು ಸುಂದರವಾದ ಪ್ರದೇಶಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ಮರೆಯಬೇಡಿ ಅಂತೆಯೇ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗೆ ಮುಂದೆ ಉತ್ತಮ ಭವಿಷ್ಯವಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಓದಲು ಅಸಡ್ಡೆ ತೋರಿದರೆ ಮುಂದಿನ ಬದುಕು ಕಷ್ಟವಾಗುತ್ತದೆ. ಹಾಗಾಗೀ ದೊಡ್ಡ ಗುರಿ ಮುಂದಿಟ್ಟುಕೊಂಡು ಉತ್ತಮ ವಿದ್ಯಾಭ್ಯಾಸ ನಡೆಸಿ ಸಾಧಕರಾಗಿ ಹೊರಹೊಮ್ಮಿ ಎಂದರು.
ಬದುಕಿನಲ್ಲಿ ಸಾಧನೆ ಇಲ್ಲದೇ ಸತ್ತರೆ ಆ ಸಾವಿಗೆ ಅವಮಾನವಂತೆ ಅಂತೆಯೇ ಈ ಪ್ರೌಢಾವಸ್ಥೆ ಹಗ್ಗದ ಮೇಲಿನ ನಡೆಗೆಯಂತೆ ಬಹಳ ಜಾಗರೂಕರಾಗಿರಬೇಕು. ಇದರಲ್ಲಿ ನೀವು ಯಶಸ್ವಿಯಾದರೆ ಸಮಾಜ ನಿಮ್ಮನ್ನು ಗುರಿಸುತ್ತದೆ ಹಾಗೂ ಗೌರವಿಸುತ್ತದೆ ಇಲ್ಲವಾದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಪೋಷಕರು ಮಕ್ಕಳ ಬಗೆಗೆ ಹಲವು ಕನಸುಗಳನ್ನು ಹೊತ್ತಿರುತ್ತಾರೆ. ಶಿಕ್ಷಕರು ಕೂಡ ತಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಕಣ್ತುಂಬಿಕೊಳ್ಳಲು ತುದಿಗಾಗಲ್ಲಿ ನಿಂತಿರುತ್ತಾರೆ. ಮಕ್ಕಳ ಯಶಸ್ಸು ವಿದ್ಯಾರ್ಥಿಗಳಿಗೆ ಸ್ವರ್ಗ ಸದೃಶ್ಯವಾಗಿರುತ್ತದೆ ಹಾಗಾಗೀ ಇದರ ಮೌಲ್ಯವನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ಈ ಜಗತ್ತಿನಲ್ಲಿ ಅಸಾಧ್ಯವಾದುದ್ದು ಯಾವುದು ಇಲ್ಲ ಹಠ,ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಮಹತ್ತರವಾದ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿವುದನ್ನು ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕು ಸಾಧನೆಯೊಂದನ್ನೆ ಮುಖ್ಯವಾಗಿರಿಸಿಕೊಂಡು ಮುನ್ನಡೆದು ಯಶಸ್ಸು ಗಳಿಸಿ ಎಂದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮೋಹನ್, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಇತರರು ಇದ್ದರು.