ಜಿಲ್ಲೆ

ಮಕ್ಕಳ ಸಾಧನೆಗೆ ಪಾಲಕರ ಬೆಂಬಲ ಅಗತ್ಯ

ಹಲಗೂರು: ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಹಂತದಲ್ಲೂ ಅವರ ಪಾಲಕರು ಬೆಂಬಲ ನೀಡಿದರೆ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಸಮೀಪದ ಮಾರಗೌಡನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಹೆಚ್ಚು ಹಣ ಖರ್ಚು ಖಾಸಗಿ ಶಾಲೆಗಳಲ್ಲಿ ಓದಿದ್ದಾರೆ ಎಂಬ ಭಾವನೆ ಇದೆ. ಆದರೆ ನಾನು ನಿಮ್ಮಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಈ ಸ್ಥಾನದಲ್ಲಿ ಬಂದು ನಿಂತಿದ್ದೇನೆ. ಇದಕ್ಕೆ ಕಾರಣ ನಮ್ಮ ಸರ್ಕಾರಿ ಶಿಕ್ಷಣದ ವ್ಯವಸ್ಥೆ. ಆದರೆ ನಾವು ಓದುವಾಗ ಶಾಲೆಗಳಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಈಗ ಪ್ರತಿ ಸರ್ಕಾರಿ ಶಾಲೆಯಲ್ಲೂ ಬಿಸಿಯೂಟದ ಜತೆಗೆ ಅನೇಕ ಸೌಲಭ್ಯಗಳಿವೆ. ಇಷ್ಟೆಲ್ಲ ಅನುಕೂಲತೆಗಳಿರುವಾಗ ನೀವು ಒಂದು ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆಯಿರಿ ಎಂದರು.

ಶಿಕ್ಷಕ ಬಸವರಾಜು ಮಾತನಾಡಿ, ನಮ್ಮ ಶಾಲೆ ಪ್ರಾರಂಭವಾಗಿ ಸುಮಾರು 27 ವರ್ಷವಾಯಿತು. ಈಗ ನಮ್ಮ ಶಾಲೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಹಾಗೂ ವೈದ್ಯರಾಗಿ ಹೀಗೆ ಅನೇಕ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ದೃಷ್ಟಿ ಇಟ್ಟುಕೊಂಡು ಸುಮಾರು 20 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿ ವಿದ್ಯಾರ್ಥಿಗಳಿಗೆ ಓದಲು ಡೆಸ್ಕ್, ಊಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ನೆಲಕ್ಕೆ ಮೊಸಾಯಿಕ್ ಹಾಗೂ ಬಿಸಿಲು, ಮಳೆ ಬಂದಾಗ ಪ್ರಾರ್ಥನೆಗೆ ಅನುಕೂಲವಾಗಲು ಶಾಲೆ ಆವರಣದಲ್ಲೊ ಛಾವಣಿಗಳನ್ನು ಹಾಕಿಸುವುದರ ಮುಖಾಂತರ ಸಹಕರಿಸಿದ್ದಾರೆ. ಅವರಿಗೆ ನಮ್ಮ ಶಾಲೆಯ ವತಿಯಿಂದ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಗಣ್ಯರನ್ನು ಪೂರ್ಣ ಕುಂಭದೊಡನೆ ದಾರಿ ಉದ್ದಕ್ಕೂ ಪುಷ್ಪ ಚೆಲ್ಲುತ್ತಾ ಶಾಲಾವರಣಕ್ಕೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ, ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಅಜಯ್ ಕುಮಾರ್, ಮುಖ್ಯ ಶಿಕ್ಷಕಿ ಶಕುಂತಲಾ, ಪುಟ್ಟಸ್ವಾಮಿ, ಗ್ರಾಮದ ಮುಖಂಡ ಜವರೇಗೌಡ, ಸಿದ್ದಾಚಾರಿ, ತೊರೆ ಕಾಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಪಿ.ರಾಜು, ಎಸ್‌ಡಿಎಂಸಿ ಅಧ್ಯಕ್ಷ ನಂದೀಶ ಮತ್ತು ಸದಸ್ಯರು, ಶಿಕ್ಷಕಕರು ಇತರರಿದ್ದರು.