ಶನಿವಾರಸಂತೆ: ಪಾಲಕರು ತಮ್ಮ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಬೇಕು ಎಂದು ಶಿಕ್ಷಕ ಕೆ.ಪಿ.ಜಯಕುಮಾರ್ ಸಲಹೆ ನೀಡಿದರು.
ಶ್ರೀ ವಿಘ್ನೇಶ್ವರ ಬಾಲಿಕ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 2022-23ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ತಾಯಿ, ತಂದೆ ಮತ್ತು ಗುರು ಬದುಕಿನಲ್ಲಿ ಶ್ರೇಷ್ಠರಾಗುತ್ತಾರೆ. ತಾಯಿ ಮಕ್ಕಳಿಗೆ ಮನೆಯ ಮೊದಲ ಗುರುವಾದರೆ, ಶಿಕ್ಷಕ ಜೀವನದ ಗುರುವಾಗುತ್ತಾನೆ. ಪಾಲಕರು ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಸಿದರೆ ಮಕ್ಕಳು ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದರು.
ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಮಾತನಾಡಿ, ಪಾಲಕರು ಇಂದು ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲೂ ಅವಕಾಶಗಳಿದ್ದು ಪಾಲಕರು ಹೆಣ್ಣು ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೆ.ಇ.ಕೃಷ್ಣರಾಜು, ಕಾರ್ಯದರ್ಶಿ ಸಿ.ಎನ್.ಬೆಳ್ಳಿಯಪ್ಪ, ಅಧ್ಯಕ್ಷ ಬಿ.ಬಿ.ಲೋಕೇಶ್, ನಿರ್ದೇಶಕಿ ನಿತ್ಯಾನಿಧಿ, ಮಹಾ ಪೋಷಕಿ ಎಸ್.ಬಿ.ಯಶೋದಾ, ಜಿಪಂ ಮಾಜಿ ಸದಸ್ಯೆ ಸರೋಜಮ್ಮ, ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಫರ್ವಿಜಾನ್ ಶಾಹಿದ್ ಖಾನ್, ದುಂಡಳ್ಳಿ ಗ್ರಾಪಂ ಉಪಾಧ್ಯಕ್ಷ ನಿತಿನ್, ಸದಸ್ಯರಾದ ಡಿ.ಬಿ.ಬೋಜಪ್ಪ, ಸಿ.ಜೆ.ಗಿರೀಶ್, ಎಸ್.ಪಿ.ಭಾಗ್ಯಾ ಹಾಜರಿದ್ದರು. ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.