ಬಸವಕಲ್ಯಾಣ: ನಗರದ ಎಂ.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಹಕ್ಕು ಗುಂಪುಗಳ ಒಕ್ಕೂಟದಿಂದ ಶನಿವಾರ ಸುದ್ದಿಗೋಷ್ಠಿ ನಡೆಸಿ, ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡುವ ವಿಭಿನ್ನ ಪ್ರಯತ್ನ ನಡೆಯಿತು.
ಮಕ್ಕಳ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷೆ ದೀಕ್ಷಾ, ಉಪಾಧ್ಯಕ್ಷೆ ಸುಮಿತ್, ಸದಸ್ಯರಾದ ಮೇಘಾ, ಗೌರಿ ಜಂಟಿಯಾಗಿ ಮಾತನಾಡಿ, ದೇಶದೆಲ್ಲೆಡೆ ಮಕ್ಕಳ ದಿನ ಆಚರಿಸುತ್ತಿದ್ದರೂ ಇಂದಿಗೂ ಹಲವು ಮಕ್ಕಳು ಶಾಲೆಯಿಂದ ವಂಚಿತರಾಗಿದ್ದು, ಅವರಿಗೆ ಮೂಲಭೂತ ಹಕ್ಕುಗಳು, ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಅವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕು. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ದೇಶದಲ್ಲಿ ಉಚಿತ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು ೧೩ ವರ್ಷವಾದರೂ ಹಲವು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ೬ ರಿಂದ ೧೪ ವರ್ಷ ಒಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ಸಿಗಬೇಕು ಮತ್ತು ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಯಲ್ಲಿ ಇರಬೇಕು. ಶಾಲೆಗಳಲ್ಲಿ ಶಿಕ್ಷಕರು, ಶೌಚಗೃಹ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಗ್ರಂಥಾಲಯ, ತರಗತಿ ಕೋಣೆ, ದೈಹಿಕ ಹಿಂಸೆ ನಿಷೇಧದ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಡತನ, ಲಿಂಗ ತಾರತಮ್ಯ, ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಬಾಲ ಭಿಕ್ಷಾಟನೆ, ಮೂಢ ನಂಬಿಕೆ, ಮಕ್ಕಳ ಮಾರಾಟ/ಸಾಗಾಟ. ಶಾಲೆಯಿಂದ ಹೊರಗಿರುವ ಮಕ್ಕಳು, ಅಪೌಷ್ಟಿಕ ಮಕ್ಕಳು, ಹೆಣ್ಣು ಮಕ್ಕಳ ಮಾರಾಟ/ಸಾಗಾಟ, ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ಸಮಸ್ಯೆ ಕುರಿತು ಗಮನ ಸೆಳೆದರು.
ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಯೋಜನಾ ಸಂಯೋಜಕ ಸಂಪತ್ ಕಟ್ಟಿ, ಜಿಲ್ಲಾ ಸಂಯೋಜಕ ನಾಗರಾಜ ಶೀಲವಂತ, ಸಮುದಾಯ ಸಂಘಟಕ ನಟರಾಜ್, ತಡೋಳಾ, ಯರಂಡಿ, ಬೆಟಬಾಲಕುಂದಾ, ಸಸ್ತಾಪುರ, ಪ್ರತಾಪುರ, ಧನ್ನೂರ ಕೆ, ಇಸ್ಲಾಂಪುರ ಇತರರಿದ್ದರು.