ಬಾಗಲಕೋಟೆ: ಅಂಗನವಾಡಿಗಳಲ್ಲಿರುವ ಮಕ್ಕಳ ಸಂಖ್ಯೆ ಅನುಗುಣವಾಗಿ ದಾಸ್ತಾನು ಉಪಯೋಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಶು ಅಭಿವೃದ್ಧಿ ಯೋಜನಾಽಕಾರಿ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಅಂಗನವಾಡಿಗಳಲ್ಲಿ ಇರುವ ಮಕ್ಕಳ ಸಂಖ್ಯೆ ಅನುಸಾರವಾಗಿಯೇ ದಾಸ್ತಾನು ಬಳಸಿ, ಅನಾವಶ್ಯಕವಾಗಿ ಮಕ್ಕಳ ಸಂಖ್ಯೆ ಹೆಚ್ಚಿಗೆ ತೋರಿಸದಿರಿ, ದಾಸ್ತಾನು ಪುಸ್ತಕ ನಿರ್ವಹಿಸಿ ಆಗಾಗ ಪರಿಶೀಲನೆ ಮಾಡಿ ಅದರಲ್ಲಿರುವ ನ್ಯೂನತೆಗಳ ಬಗ್ಗೆ ಷರಾ ನಮೂದಿಸಬೇಕು ಎಂದರು.
ಮಕ್ಕಳಿಗೆ ನೀಡುವ ಮೊಟ್ಟೆಗಳ ಪ್ರಮಾಣವು ಸರಿಯಾಗಿರಬೇಕು ಹಾಗೂ ಅವರಿಗೆ ನೀಡುವ ಆಹಾರವು ಪೌಷ್ಠಿಕವಾಗಿ ಮತ್ತು ಸ್ವಚ್ಚವಾಗಿರಬೇಕು. ಎಂ.ಎಸ್.ಪಿ.ಟಿ.ಸಿ ಯಿಂದ ಬರುವ ಆಹಾರ ಪದಾರ್ಥಗಳನ್ನು ಸರಿಯಾಗಿ ಪರಿಶೀಲಿಸಬೇಕು. ಅಲ್ಲದೆ ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಕಡ್ಡಾಯವಾಗಿ ತಿಂಗಳಿಗೆ ಎರಡು ಬಾರಿ ಎಂ.ಎಸ್.ಪಿ.ಟಿ.ಸಿ ಗೆ ಭೇಟಿ ನೀಡಬೇಕು ಎಂದು ಹೇಳಿದರು.
ಎಲ್ಲಾ ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕಿಯರು ಪ್ರತಿ ತಿಂಗಳು ಕಡ್ಡಾಯವಾಗಿ ತಮ್ಮ ತಮ್ಮ ವ್ಯಾಪ್ತಿಯ ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲನೆ ಮಾಡತಕ್ಕದ್ದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್, ಲೈಟ್ ಹಾಗೂ ಶೌಚಗೃಹ ವ್ಯವಸ್ಥೆ ಕುರಿತು ಪರಿಶೀಲಿಸಿ ಮುಂದಿನ ಹದಿನೈದು ದಿನದೊಳಗಾಗಿ ವರದಿ ನೀಡಬೇಕು ಎಂದು ಸೂಚಿಸಿದರು.
ಅಂಗನವಾಡಿಯ ಸ್ವಚ್ಚತೆಗೆ ಆದ್ಯತೆ ನೀಡುವದರೊಂದಿಗೆ ಮಕ್ಕಳ ಕಲಿಕಾ ವ್ಯವಸ್ಥೆ ಸುಧಾರಿಸಬೇಕು, ಸ್ಯಾಮ್ ಮತ್ತು ಮ್ಯಾಮ್ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ ಇದ್ದರು.