ಕೆ.ಆರ್.ಪೇಟೆ: ಶಾಲಾ ಹಂತದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರ ಮತ್ತು ಪಾಲಕರು ಜಂಟಿಯಾಗಿ ಜವಾಬ್ದಾರಿ ನಿರ್ವಹಿಸಬೇಕು. ಆ ಮೂಲಕ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಗವಿಮಠ ವಸತಿ ಶಾಲೆಯ ಪ್ರಾಂಶುಪಾಲ ಕುಪ್ಪಳ್ಳಿ ಪ್ರಸನ್ನ ಅಭಿಪ್ರಾಯಪಟ್ಟರು.
ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ತಾಲೂಕಿನ ಬೂಕನಕೆರೆ ಹೋಬಳಿಯ ಗವಿಮಠದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಪಾಲಕರು ಹಾಗೂ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಭೆ ದೂರುಗಳಿಗಷ್ಟೇ ಸೀಮಿತವಾಗದೆ ಮಗುವಿನ ಸಮಗ್ರ ಕಲಿಕಾ ಪ್ರಕ್ರಿಯೆ ವಿಶ್ಲೇಷಿಸುವ ಹಾಗೂ ಮಗುವಿನ ಮಾನಸಿಕ ಬೆಳವಣಿಗೆ ಕುರಿತು ಚರ್ಚಿಸುವ ವೇದಿಕೆಯಾಗಬೇಕು. ಸಮಸ್ಯೆಗಳಿಗೆ ಪರಿಹಾರ ನೀಡುವ, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ತಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಶಿಕ್ಷಕರಾದ ಮೊಸಸ್, ಮಮತಾ, ದಾಕ್ಷಾಯಿಣಿ, ರವಿ, ರೂಪಾ, ವೇಣು, ತಾಂಡವಮೂರ್ತಿ, ನಾಗೇಂದ್ರ, ಪುಟ್ಟರಾಜು ಇತರರಿದ್ದರು.