ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಯಲ್ಲಿ ವ್ಯಕ್ತಿ ಜತೆಗೆ ಸಮಾಜದ ಅಭಿವೃದ್ಧಿ ಅಡಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಬೇಕು ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ನಗರದ ಜಿಜಾಮಾತಾ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಸಾವಿತ್ರಿಬಾಯಿ ಫುಲೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲು ಎಂ.ಜಿ.ಮುಳೆ ಅವರು ಕಲ್ಯಾಣದಲ್ಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ. ಇಲ್ಲಿ ಶಿಕ್ಷಣದ ಜತೆಗೆ ವಿವಿಧ ಚಟುವಟಿಕೆಗಳು ನಡೆಸುವ ಮೂಲಕ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೀದರ್ ಛತ್ರಪತಿ ಸ್ಮಾರಕ ಸಮಿತಿ ಕಾರ್ಯದರ್ಶಿ ಸತೀಶ ಮುಳೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.
ಬೌದ್ಧ ಧಮ್ಮ ಪ್ರಚಾರಕ ಪೂಜ್ಯ ಮಿಲಿಂದ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಮಕ್ಕಳು ಓದಬೇಕು. ಜೀವನದಲ್ಲಿ ಸ್ಫೂರ್ತಿ ಪಡೆಯಬೇಕು. ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿಯನ್ನಾಗಿ ಮಾಡಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೇಗಾಂವ, ಮುಖಂಡ ನಾರಾಯಣ ರಾಂಪುರೆ ಮಾತನಾಡಿದರು. ಪರ್ತಾಪುರ ಗ್ರಾಪಂ ಉಪಾಧ್ಯಕ್ಷ ಖಂಡೇರಾವ ಕುಲ್ಕರ್ಣಿ, ತಾಲೂಕು ಸರ್ಕಾರಿ ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ ಮಾನೆ, ಪ್ರಮುಖರಾದ ಎ.ಎನ್.ದೇಶಪಾಂಡೆ, ರಾಜು ಡೋಲೆ, ಮಧುಕರ ಕುಲ್ಕರ್ಣಿ, ಗೋವಿಂದರಾವ ಮುಳೆ, ಸದಾನಂದ ಬಿರಾದಾರ, ರಾಜು ಭೋಸಲೆ, ಮಾಧವ ಗಣೇಶ, ಬಸವರಾಜ ಮುನ್ನೋಳಿ, ಖಾಸಿಂಬೇಗ್, ಉದ್ಧವರಾವ ಉಪಾಸೆ, ಭಾನುದಾಸ ಪಾಟೀಲ್, ಸಂಭಾಜಿ ಜಗತಾಪ, ಬ್ರಹ್ಮಾನಂದರೆಡ್ಡಿ, ಅಶೋಕ ಪಾಟೀಲ್, ಭೀಮರಾವ ಶಿಂಧೆ, ಮಹೇಶ ಮುಳೆ, ಪ್ರಾಚಾರ್ಯ ದಯಾನಂದ ಸೂರ್ಯವಂಶಿ, ಮುಖ್ಯಗುರು ಪ್ರಕಾಶ ದಾಂಡಗೆ, ವಿಶ್ವನಾಥ ಪಾರಶೆಟ್ಟಿ, ರಮೇಶ ಬಿರಾದಾರ, ಅನಿತಾ ಕಟ್ಟಿಮನಿ ಇದ್ದರು.
ಪ್ರೌಢ ಶಾಲೆ ಮುಖ್ಯಗುರು ಪ್ರತಾಪ ಸೂರ್ಯವಂಶಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಚ್‌ಎಂ ಬಾಲಾಜಿ ಬಿರಾದಾರ ವಂದಿಸಿದರು. ದ್ವಾರಕಾಬಾಯಿ ಪಾಟೀಲ್ ಹಾಗೂ ಭರತ ಭರಮದೆ ನಿರೂಪಣೆ ಮಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವ ಸಾಧಕರನ್ನು ಸನ್ಮಾನಿಸಲಾಯಿತು.