- ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವ ಶನಿವಾರ ನೆರವೇರಿತು. ಗ್ರಾಮದ ಬಸ್ ನಿಲ್ದಾಣದಲ್ಲಿರುವ ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಿದರು.
- ಶ್ರೀ ಭಗೀರಥ ಮಹರ್ಷಿ ನಮ್ಮೆಲ್ಲರಿಗೂ ಸ್ಫೂರ್ತಿ. ಹಿಡಿದ ಕೆಲಸವನ್ನು ಪಟ್ಟು ಹಿಡಿದು ಸಾಧಿಸುವ ಛಲ ಶ್ರದ್ಧೆ ಎಲ್ಲರಿಗೂ ಮಾರ್ಗದರ್ಶನವಾಗಬೇಕು. ಇಂತಹ ಮಹಾತ್ಮರ ಜಯಂತಿಯನ್ನು ಆಚರಿಸುತ್ತಿರುವುದು, ಅವರನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ. ಭಗೀರಥ ಮಹರ್ಷಿಗಳಿಗಿದ್ದ ಶ್ರದ್ಧೆ, ದೃಢತೆ, ಛಲ ಎಲ್ಲವನ್ನೂ ನಾವು ಮೈಗೂಡಿಸಿಕೊಳ್ಳೋಣ. ಅವರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ತಿಳಿಸಿದರು.
ಉಪ್ಪಾರ ಸಮುದಾಯ ಹಿಂದುಳಿದಿದ್ದು, ಮಕ್ಕಳು ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಾಧನೆ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ತಿಳಿದು ಅನುಕೂಲ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವೆ. ಅಧಿಕ ಮತ ನೀಡಿದ ಜನರು ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ ಎಂದರು.
- ಕಾರ್ಯಕ್ರಮದಲ್ಲಿ ಉಪ್ಪಾರ ಸಮುದಾಯದ ಮುಖಂಡರು, ಭಗೀರಥ ಮಹರ್ಷಿ ಸಂಘದ ಸದಸ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.