ಗಂಡಸಿ: ಕಂಪ್ಯೂಟರ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ತಂತ್ರಜ್ಞಾನಗಳ ಮೂಲಕ ಶಿಕ್ಷಣದ ಬೋಧನೆಗಳು ನಡೆಯುತ್ತಿದ್ದರೂ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ರೂಪಿಸಲು ಶಿಕ್ಷಕರು ಬೋಧಿಸುವ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಗಂಡಸಿ ಶ್ರೀ ಶಂಭುಲಿಂಗೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಟಿ.ರಂಗಸ್ವಾಮಿ ಹೇಳಿದರು.
ಅರಸೀಕೆರೆ ತಾಲೂಕು ಗಂಡಸಿ ಶ್ರೀ ಶಂಭುಲಿಂಗೇಶ್ವರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಸ್ವಾರ್ಥಸೇವೆ, ನೈತಿಕ ಮೌಲ್ಯವುಳ್ಳ ಶಿಕ್ಷಕರೂ ಆದ ಡಾ.ಎಸ್.ರಾಧಾಕೃಷ್ಣ ಅವರು ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವ ಜನರಿಗೆ ಶಿಕ್ಷಕರು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಈಗಿನ ಮಕ್ಕಳಲ್ಲಿ ಬುದ್ಧಿಶಕ್ತಿ ಕೊರತೆ ಇಲ್ಲ. ಆದರೆ, ಗುರು-ಹಿರಿಯರಲ್ಲಿ ತೋರಿಸುವ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಗುರುಗಳು ಶಾಲೆಯಲ್ಲಿ ಹಾಗೂ ಪಾಲಕರು ತಮ್ಮ ಮನೆಯಲ್ಲಿ ಉತ್ತಮ ಸಂಸ್ಕಾರದ ಪಾಠ ನೀಡಬೇಕಾಗಿದೆ. ಜ್ಞಾನ ಪರಂಪರೆಯಲ್ಲಿ ದೇಶ ಬೇರೆ ಯಾವುದೇ ದೇಶ ಕಾಣದ ಯಶಸ್ಸನ್ನು ಕಂಡಿದ್ದು, ಈ ಸ್ಪರ್ಧಾ ಯುಗದಲ್ಲಿ ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಸುಧಾರಣೆಗೊಂಡು ದೇಶ ಅಭಿವೃದ್ಧಿಯತ್ತ ಸಾಗಲು ವಿದ್ಯಾರ್ಥಿಗಳು ಡ್ರಗ್ಸ್‌ನಂಥ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ವಿದ್ಯಾಭ್ಯಾಸದತ್ತ ಹೆಚ್ಚಿನ ಕಾಳಜಿ ವಹಿಸಿ ಪಾಲಕರು ಮತ್ತು ಗುರುಗಳು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಶಂಭುಲಿಂಗೇಶ್ವರ ಪ್ರೌಢಶಾಲೆಯ ಎಚ್.ಸಿ.ತೇಜುಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಪರಿಸರವಾದಿ, ಶ್ರೀ ಕೋಡಿಮಠ ಕಾಲೇಜಿನ ಉಪನ್ಯಾಸಕ ಬಿ.ಡಿ.ಕುಮಾರ್, ಸಂಸ್ಥೆ ಖಜಾಂಚಿ ಜಿ.ಎನ್. ದ್ಯಾವೇಗೌಡ, ಶ್ರೀ ಶಂಭುಲಿಂಗೇಶ್ವರ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕರಾದ ಸೌಭಾಗ್ಯಾ, ಗಂಗಾಧರ್, ಗಂಗಾಧರಪ್ಪ, ಜಯರಾಮು, ನಂಜೇಶಿಗೌಡ ಇತರರು ಇದ್ದರು.