ಜಿಲ್ಲೆ

ಮಕ್ಕಳ ರೀತಿಯಲ್ಲಿ ಸೋಂಕಿತರ ಕಾಳಜಿ, ತಹಸೀಲ್ದಾರ್ ಕೆ. ಮಂಜುನಾಥ್ ಮಾಹಿತಿ, ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗಳ ಯೋಗಕ್ಷೇಮ ವಿಚಾರಣೆ

ನೆಲಮಂಗಲ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತರನ್ನು ತಾಲೂಕು ಆಡಳಿತ ಮಕ್ಕಳಂತೆ ನೋಡಿಕೊಳ್ಳುತ್ತಿದೆ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.

ನಗರಸಭೆ ವ್ಯಾಪ್ತಿಯ ವಿಶ್ವೇಶ್ವರಪುರ ಗ್ರಾಮದ ಟಿಬೇಟಿಯನ್ ಸೆಂಟರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ವ್ಯವಸ್ಥೆ ಮಾಡಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಯೋಗಕ್ಷೇಮವನ್ನು ಬುಧವಾರ ವಿಚಾರಿಸಿ ಮಾತನಾಡಿದರು.

ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ ಪೈಕಿ ನೆಲಮಂಗಲ ತಾಲೂಕಿನಲ್ಲಿ ನಾಲ್ಕೈದು ದಿನದಿಂದ ಸೋಂಕು ಕಡಿಮೆಯಾಗುತ್ತಿದೆ. ನಗರದ 2 ಭಾಗಗಳಲ್ಲಿ 220 ಹಾಸಿಗೆಗಳ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಾಗಿದ್ದು, ಸದ್ಯ 85 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗೆ ನಿತ್ಯ ಪೌಷ್ಟಿಕಾಂಶಭರಿತ ಆಹಾರದ ಜತೆಗೆ ಬಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಸೋಂಕಿತರಿಗೂ ಔಷಧ ಕಿಟ್ ಕೊಡಲಾಗಿದೆ. ಪ್ರತಿದಿನ ವೈದ್ಯರು 4 ಬಾರಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಎಂದು ವಿವರಿಸಿದರು.

ಸೋಂಕಿತರಿಗೆ ಧೈರ್ಯ: ನಗರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಬಿಸಿನೀರನ್ನು ಬಳಸಬೇಕು. ಸೋಂಕಿತರ ಕುಟುಂಬದ ಸದಸ್ಯರಿಗೆ ಕರೊನಾ ಸಂಚಾರಿ ಕ್ಲಿನಿಕ್ ಮೂಲಕ ವೈದ್ಯರನ್ನು ಕಳುಹಿಸಿ ಸಲಹೆ ನೀಡಲಾಗುತ್ತಿದೆ. ನಿಮ್ಮೊಂದಿಗೆ ತಾಲೂಕು ಆಡಳಿತ ಸದಾ ನಿಲ್ಲುತ್ತದೆ ಎಂದು ಹೇಳುವ ಮೂಲಕ ಸೋಂಕಿತರಿಗೆ ಧೈರ್ಯ ತುಂಬಲು ತಹಸೀಲ್ದಾರ್ ಪ್ರಯತ್ನಿಸಿದರು.

ಅರ್ಜುನ ಬೆಟ್ಟ ಹಳ್ಳಿಯಲ್ಲಿ ಕೇಂದ್ರ: ತಾಲೂಕಿನ ಅರ್ಜುನ ಬೆಟ್ಟ ಹಳ್ಳಿಯಲ್ಲಿ ಶ್ರೀ ಸನಾತನ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ನ ಶ್ರೀ

ಶ್ರೀನಿವಾಸ ಸ್ವಾಮಿ ಅವರ ಜತೆ ಮಾತುಕತೆ ನಡೆಸಲಾಗಿದೆ. ಈಗಾಗಲೇ 60 ಹಾಸಿಗೆ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ಅಲ್ಲಿ ನಿರ್ಮಿಸಲಾಗುತ್ತಿದೆ ಎಂದು ಕೆ. ಮಂಜುನಾಥ್ ತಿಳಿಸಿದರು.

ತಹಸೀಲ್ದಾರ್‌ಗೆ ಧನ್ಯವಾದ ಅರ್ಪಣೆ: 5 ದಿನಗಳ ಹಿಂದೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಕ್ಸಿಜನ್ ಸ್ಯಾಚುರೇಷನ್ ತಪಾಸಣೆ ಮಾಡಿದ ವೈದ್ಯರು, ನಗರದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿದರು. ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲೂಕು ಆಡಳಿತದಿಂದ ನಿತ್ಯವೂ ಪೌಷ್ಟಿಕಾಂಸಭರಿತ ಆಹಾರ ಸಿಗುತ್ತಿದೆ. ಯಾವುದೇ ಕೊರತೆ ಇಲ್ಲದಂತೆ ನಮ್ಮನ್ನು ಆರೈಕೆ ಮಾಡಲಾಗುತ್ತಿದೆ ಎಂದು ಹೇಳಿದ ಕರೊನಾ ಸೋಂಕಿತೆಯೊಬ್ಬರು ತಹಸೀಲ್ದಾರ್‌ಗೆ ಕೃತಜ್ಞತೆ ಅರ್ಪಿಸಿದರು.