ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯ ಅಂಗನವಾಡಿಗಳಿಗೆ ಸ್ಮಾರ್ಟ್ ಟಚ್ ನೀಡುವ ಕೆಲಸ ಆರಂಭಗೊಂಡಿದೆ. ಇದರ ನಡುವೆ ಸ್ವಂತ ಕಟ್ಟಡವೇ ಇಲ್ಲದ 216 ಅಂಗವಾಡಿಗಳಿಗೆ ನರೇಗಾ ಮೂಲಕ ಕಟ್ಟಡ ಕಟ್ಟಿಕೊಡುವ ಕೆಲಸವೂ ಆಗುತ್ತಿದೆ.
ಮಕ್ಕಳಿಗೆ ಮೊದಲ ಪಾಠ ಶಾಲೆಯಾಗಿರುವ ಅಂಗನವಾಡಿಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಬಿಡದಿಯಲ್ಲಿ ಚಾಲನೆ ನೀಡಿದ್ದರು. ಇದರ ನಡುವೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದ ಅಂಗನವಾಡಿಗಳಿಗೆ ಗ್ರಾಪಂ, ತಾಪಂ ಹಾಗೂ ಜಿಪಂ ಅನುದಾನಗಳ ಜತೆಗೆ ನರೇಗಾದ 5 ಲಕ್ಷ ರೂ.ಗಳನ್ನು ಸೇರಿಸಿಕೊಂಡು ಹೊಸ ರೂಪ ನೀಡುವ ಜತೆಗೆ ಸ್ವಂತ ಕಟ್ಟಡ ಹೊಂದುವಂತೆ ಮಾಡಲಾಗಿದೆ.
ಜಿಲ್ಲೆಯಲ್ಲಿ 1301 ಅಂಗನವಾಡಿಗಳು ಹಾಗೂ 242 ಮಿನಿ ಅಂಗನವಾಡಿಗಳಿವೆ. ಇವುಗಳಲ್ಲಿ 3ರಿಂದ 6 ವಯಸ್ಸಿನ ಒಳಗಿನ 30 ಸಾವಿರ ಮಕ್ಕಳು ಪ್ರವೇಶ ಪಡೆದಿದ್ದಾರೆ. ಜಿಲ್ಲೆಯಲ್ಲಿ 979 ಅಂಗನವಾಡಿಗಳು ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. ಇನ್ನೂ 564 ಕೇಂದ್ರಗಳಿಗೆ ಸರ್ಕಾರ ಬಾಡಿಗೆ ಪಾವತಿಸುತ್ತಿದೆ. ಇವುಗಳ ಪೈಕಿ 219 ಕಡೆ ಹೊಸ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಪ್ರಗತಿಯಲ್ಲಿರುವ 219 ಕಾಮಗಾರಿಗಳ ಪೈಕಿ 216ಕ್ಕೆ ನರೇಗಾ ನೆರವು ಪಡೆಯಲಾಗುತ್ತಿದೆ. ಉಳಿದಂತೆ 91 ಕಡೆಗಳಲ್ಲಿ ಜಾಗ ಲಭ್ಯವಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಇನ್ನೂ 254 ಕೇಂದ್ರಗಳಿಗೆ ನಿವೇಶನವೇ ಇಲ್ಲ.
ಚನ್ನಪಟ್ಟಣ ತಾಲೂಕಿನಲ್ಲಿ 210 ಕೇಂದ್ರಗಳಿಗೆ ಸ್ವಂತ ಕಟ್ಟಡ ಇದ್ದರೆ, 124 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 47 ಕೇಂದ್ರಗಳಿಗೆ ನಿವೇಶನವೇ ಇಲ್ಲ. ಮಾಗಡಿಯಲ್ಲಿ 267 ಸ್ವಂತ ಹಾಗೂ 124 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 32 ಅಂಗನವಾಡಿಗಳಿಗೆ ನಿವೇಶನ ಹುಡುಕಬೇಕಿದೆ. ಕನಕಪುರ ತಾಲೂಕಿನಲ್ಲಿ 210 ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದರೆ, 102 ಬಾಡಿಗೆ ಕಟ್ಟಡಲ್ಲಿವೆ. 73 ಕೇಂದ್ರಗಳಿಗೆ ನಿವೇಶನ ಬೇಕಿದೆ. ಹಾರೋಹಳ್ಳಿ ಹೊಸ ತಾಲೂಕು ವ್ಯಾಪ್ತಿಯಲ್ಲಿ 150 ಅಂಗನವಾಡಿ ಕೇಂದ್ರಗಳು ಬರಲಿದ್ದು, ಇದರಲ್ಲಿ 94 ಸ್ವಂತ ಹಾಗೂ 56 ಬಾಡಿಗೆ ಕೇಂದ್ರಗಳಲ್ಲಿ ನಡೆಯುತ್ತಿವೆ. 29 ಅಂಗನವಾಡಿ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದರೆ, 12ಕ್ಕೆ ಇನ್ನೂ ನಿವೇಶನ ಸಿಗಬೇಕಿದೆ.
ಸ್ಥಳೀಯ ನೆರವು: ಅಂಗನವಾಡಿಗಳಿಗೆ ಬೇಕಾದ ನಿವೇಶನ, ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಜತೆಗೆ ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೂ ಹೌದು. ನಗರ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆಗಳ ಜನಪ್ರತಿನಿಧಿಗಳು ಹಾಗೂ ಹಳ್ಳಿಗಳಲ್ಲಿ ಗ್ರಾಪಂ ಪ್ರತಿನಿಧಿಗಳು ಆಸಕ್ತಿ ತೋರಬೇಕು. ಇದರಂತೆ 216 ಕಟ್ಟಡಗಳಲ್ಲಿ 155 ಕಟ್ಟಡಗಳಿಗೆ ಜಿಪಂ, ತಾಪಂ ಹಾಗೂ ಗ್ರಾಪಂ ಅನುದಾನ ಬಳಕೆ ಆಗುತ್ತಿದೆ. ಜತೆಗೆ ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು ಅಂಗನವಾಡಿಗಳ ನಿರ್ಮಾಣಕ್ಕೆ ಸ್ಥಳೀಯ ಆಡಳಿತದ ಜತೆ ಕೈಜೋಡಿಸಿವೆ. ಇದರ ಫಲವಾಗಿ ಅದೆಷ್ಟೋ ಅಂಗನವಾಡಿಗಳು ಹೈಟೆಕ್ ಸ್ಪರ್ಷ ಪಡೆದುಕೊಂಡಿವೆ.
ಜಿಲ್ಲೆಯಲ್ಲಿ ನರೇಗಾ ಹಾಗೂ ಸ್ಥಳೀಯ ಆಡಳಿತದ ನೆರವಿನಿಂದ 216 ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದುತ್ತಿವೆ. ಅಲ್ಲದೆ, ಪ್ರತಿ ಅಂಗನವಾಡಿಗಳೂ ಹೈಟೆಕ್ ರೂಪ ಪಡೆದುಕೊಳ್ಳುತ್ತಿವೆ. ಸಿ.ವಿ.ರಾಮನ್, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ