ಜಿಲ್ಲೆ

ಮಕ್ಕಳ ಮೇಲೆ ಬೀದಿ ನಾಯಿಗಳಿಂದ ದಾಳಿ

ಬೇಲೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಂಗಳವಾರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.


ಅಂಗಡಿಗೆ ಹೋಗಿ ಬರುತ್ತಿದ್ದ 13 ವರ್ಷದ ಶ್ರಾವ್ಯ ಹಾಗೂ 5 ವರ್ಷದ ಮತ್ತೊಂದು ಮಗುವಿನ ಮೇಲೆ ದಾಳಿ ಮಾಡಿರುವ ಬೀದಿ ನಾಯಿಗಳು ಕಾಲು ಹಾಗೂ ತೊಡೆಯ ಭಾಗವನ್ನು ಕಚ್ಚಿ ಗಾಯಗೊಳಿಸಿವೆ. ಪಾಲಕರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.


ಪಟ್ಟಣದಲ್ಲಿ ನೂರಕ್ಕೂ ಹೆಚ್ಚು ಬೀದಿನಾಯಿಗಳಿದ್ದು, ಮಕ್ಕಳು, ವಯಸ್ಸಾದವರು ಬೀದಿಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಬೀದಿನಾಯಿಗಳು ನಮ್ಮ ಮಕ್ಕಳ ಮೇಲೆ ಎಲ್ಲಿ ದಾಳಿ ಮಾಡುತ್ತವೋ ಎನ್ನುವ ಆತಂಕದಲ್ಲೇ ಇರಬೇಕಾದ ಪರಿಸ್ಥಿತಿ ಇದೆ ಎಂದು ನಿವಾಸಿಗಳು ಕಿಡಿಕಾರಿದರು.


ನಾಯಿ ಹಾವಳಿಗೆ ಕಡಿವಾಣ ಹಾಕಬೇಕೆಂದು ಹಲವಾರು ಬಾರಿ ಗಮನಕ್ಕೆ ತಂದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪುರಸಭೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ನಾಯಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.