ಜಿಲ್ಲೆ

ಮಕ್ಕಳ ಮೇಲಿನ ಶೋಷಣೆ ತಡೆಗೆ ಶ್ರಮಿಸಿ:ಅಧಿಕಾರಿಗಳಿಗೆ ನ್ಯಾಯಾಧೀಶ ಟಿ.ಎಸ್. ಇನವಳ್ಳಿ ಸೂಚನೆ

ಹಾಸನ:  ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಎಲ್ಲಾ ಇಲಾಖೆಗಳು ಶ್ರಮಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗು ಸತ್ರ ನ್ಯಾಯಾಧೀಶರಾದ ಟಿ.ಎನ್ ಇನವಳ್ಳಿ ಸೂಚಿಸಿದರು.

ನ್ಯಾಯಾಲಯದ ಸಭಾಂಗಣದಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನ, ಮಕ್ಕಳ ಮೇಲಿನ ಲೈಂಗಿಕ ಹಾಗು ಇತರ ಶೋಷಣೆಗಳನ್ನು ತಡೆದು ರಕ್ಷಣೆ ನೀಡುವ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದು ಶಾಲೆ ,ಕಾಲೇಜು ಸಮುದಾಯಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಉತ್ತಮ ಹಾಗು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಿಕೊಡಬೇಕು. ಶಿಕ್ಷಕರು ಗುರುವಿನ ಸಮಾನ. ಅವರೇ ನೈತಿಕ ಹೊಣೆಗಾರಿಕೆ ಯಿಂದ ನಡೆದುಕೊಳ್ಳಬೇಕು. ಶಾಲೆ, ವಸತಿ ಶಿಕ್ಷಣ ವ್ಯವಸ್ಥೆಯಲ್ಲೇ ಶೋಷಣೆ ಎದುರಿಸುವಂತಾಗಬಾರದು ಎಂದು ಎಚ್ಚರಿಸಿದರು.

ಶೋಷಣೆಗೆ ಒಳಗಾದ ಸಂದರ್ಭದಲ್ಲಿ ದೂರು ನೀಡಲು ಮಕ್ಕಳು ಪೋಷಕರು ಹಿಂಜರಿಯುತ್ತಿದ್ದಾರೆ. ಆದರೆ, ಇದರಿಂದ ತಪ್ಪಿತಸ್ಥರಿಗೆ ರಕ್ಷಣೆ, ಪ್ರೋತ್ಸಾಹಸಿಗಲಿದೆ ಹಾಗಾಗಿ ಸಾಮಾಜಿಕವಾಗಿ ಅರಿವು ಮೂಡಿಸಬೇಕು ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕಬೇಕಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ,ಪದವಿ ಪೂರ್ವ ಶಿಕ್ಷಣ ಇಲಾಖೆ ,ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರ ಇಲಾಖೆಗಳು ಹೆಚ್ಚಿನ ಜವಾಬ್ಧಾರಿವಹಿಸಬೇಕು ಎಂದು ತಿಳಿಸಿದರು.

ನಾವು ಪುಸ್ತಕ ಮಾತ್ರ ಕಲಿಯುತ್ತಿದ್ದೇವೆ, ಜೀವನ ಪಾಠ ಹೇಳಿಕೊಡುವುದನ್ನು ಮರೆಯುತ್ತಿದ್ದೇವೆ. ಈಗಲಾದರು ಬದುಕಿನ ಮೌಲ್ಯ, ನೈತಿಕ ಶಿಕ್ಷಣ ಕಲಿಸಬೇಕು ಪೋಷಕರ ಮನೋಭಾವ, ಮಕ್ಕಳನ್ನು ಬೆಳೆಸುವ ರೀತಿ ಬದಲಾವಣೆ ಆಗಬೇಕು ಎಂದರು.

ಜುಲೈ 22 ರಂದು ನಗರದ ಅಂಬೇಡ್ಕರ್ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಹಾಗೂ 26 ರಂದು ಮಹಿಳಾ ದೌರ್ಜನ್ಯ ತಡೆ ಕುರಿತು ಕಾರ್ಯಾಗಾರ ಏರ್ಪಡಸಿಲಾಗಿದ್ದು ಎಲ್ಲಾ ಇಲಾಖೆಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರವಿಕಾಂತ್ ಮಾತನಾಡಿ, ವಸತಿ ಶಾಲೆಗಳಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮ ನಡೆಸಿ, ಜಿಲ್ಲೆಯ ಎಲ್ಲಾ ಶಿಕ್ಣಕರಿಗೂ ವಿಶೇಷ ಕಾರ್ಯಾಗಾರ ಏರ್ಪಡಿಸಬೇಕು. ಬಾಲ್ಯ ವಿವಾಹ ತಡೆಗೆ ಪರಿಣಾಮಕಾರಿ ಕ್ರಮಗಳಾಗಬೇಕು. ಮುಗ್ಧ ಮಕ್ಕಳ ರಕ್ಷಣೆ ದೊರೆಯಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, ನಮ್ಮಲ್ಲಿ ನೈತಿಕತೆ ಕುಸಿಯುತ್ತಿದೆ, ನಾವು ಮಕ್ಕಳಲ್ಲಿ ಸಂಸ್ಕಾರ ಕಲಿಸಬೇಕಿದೆ ಜೊತೆಗೆ ಎಲ್ಲಾ ಇಲಾಖೆಗಳೂ ನಮ್ಮ ದೇಶದ ಮುಂದಿನ ಭವಿಷ್ಯವಾಗಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಎಲ್ಲೂ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚಿ ನೈತಿಕ ಶಿಕ್ಷಣ ಕಲಿಸಬೇಕು. ಸಂಬಂಧಗಳ ಮೌಲ್ಯ ಕಲಿಸಬೇಕು ಎಂದು ಹೇಳಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರು ಸಹ ಮಾತನಾಡಿದರು. ಜಿಲ್ಲಾ ಸ್ಕೌಟ್ ಮತ್ತು ಗೈಡ್ ಆಯುಕ್ತ ಡಾ ವೀರಭದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಸುರೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪ್ರಕಾಶ್ , ಮಹಾಲಿಂಗಯ್ಯ , ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಇದ್ದರು.