ಬಸವಕಲ್ಯಾಣ: ಮುಗ್ಧತೆಯಿಂದ ಕೂಡಿದ ಪ್ರಾಂಜಲ ಮನಸ್ಸಿನ ಮಕ್ಕಳು ದೇವರ ಪ್ರತಿರೂಪವಾಗಿರುತ್ತಾರೆ. ಮಕ್ಕಳ ಮನಸ್ಸು ಸುಂದರ ಗುಲಾಬಿಯಂತೆ ಅತ್ಯಂತ ಮೃದುವಾಗಿದ್ದು, ಅಂತಹ ಮನದಲ್ಲಿ ಮೌಲ್ಯಗಳು ಕೃಷಿ ಗೊಳಿಸುವ ಕಾರ್ಯ ಪ್ರತಿ ಪಾಲಕರ ಆದ್ಯ ಜವಾಬ್ದಾರಿಯಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದ ದಾಸೋಹ ಮಂಟಪದಲ್ಲಿ ದೇಶದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ ನಿಮಿತ್ತ ಗುರುವಾರ ಆಯೋಜಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನೆಹರು ಅವರು ಈ ರಾಷ್ಟ್ರಕಂಡ ಧೀಮಂತ ನಾಯಕರಾಗಿದ್ದು, ಅವರು ನೀಡಿದ ಕೊಡುಗೆ ದೇಶ ಯಾವತ್ತೂ ಮರೆಯುವಂತಿಲ್ಲ ಎಂದರು.
ಭವಿಷ್ಯ ಭಾರತದ ದೊಡ್ಡ ಆಸ್ತಿಯೇ ಮಕ್ಕಳು, ಇಂದಿನ ಮಕ್ಕಳಿಗೆ ತಂದೆ -ತಾಯಿಯಂದಿರು ಬಹಳ ಜಾಗೃತೆಯಿಂದ ದೇಶದ ಸತ್ಪ್ರಜೆಗಳಾಗುವಂತೆ ಬೆಳೆಸಬೇಕು. ಮಕ್ಕಳು ಯಾವ ಹಂತದಲ್ಲೂ ಜಾರಿ ಬೀಳದಂತೆ ಕುಟುಂಬ, ಸಮಾಜ, ಸರ್ಕಾರ ಸಾಮೂಹಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ, ಅಂದಾಗ ಮಾತ್ರ ಇಂದಿನ ಮಕ್ಕಳು ರಾಷ್ಟ್ರದ ಸಂಪತ್ತು ಆಗಲು ಹಾಗೂ ಚಾಚಾ ನೆಹರು ಕನಸು ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಪರಮೇಶ್ವರ ಹೊಳಕುಂದೆ, ಹೇಮಲತಾ ಹಿರೇಮಠ, ಗುರುನಾಥ ದಸ್ತಾಪುರ, ವೈಜನಾಥ ದಸ್ತಾಪುರ ಇತರರಿದ್ದರು. ಐ.ಜಿ.ಮಠಪತಿ ಸ್ವಾಗತಿಸಿದರು. ಶಿವಾನಂದ ಪೂಜಾರಿ ವಂದಿಸಿದರು. ಹಾರಕೂಡದ ಪರಮ ಪೂಜ್ಯರು ಮಕ್ಕಳಿಗೆ ಸಿಹಿ ವಿತರಿಸಿ ಆಶೀರ್ವದಿಸಿದರು.