ಜಿಲ್ಲೆ

ಮಕ್ಕಳ ಮನಸ್ಸು ಅರಿತು ಬೋಧಿಸಬೇಕಿದೆ: ಸಿ.ಎನ್.ಮಂಜೇಗೌಡ

ಆರ್.ಕೃಷ್ಣ

ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು, ಸಂಯಮ, ಛಲ, ಪ್ರಾಮಾಣಿಕತೆ ಗುಣಗಳನ್ನು ಬೆಳೆಸಿಕೊಂಡರೆ ಒಳ್ಳೆಯ ಪ್ರಜೆಯಾಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅಭಿಪ್ರಾಯಪಟ್ಟರು.
ಚಾಮುಂಡಿಪುರಂನಲ್ಲಿರುವ ಬಾಲಬೋಧಿನಿ ಶಾಲೆಯಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್, ಜೀವದಾರ ರಕ್ತನಿಧಿ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಮಕ್ಕಳಿಗೆ ರಕ್ತದ ಗುಂಪು ಉಚಿತ ಪರೀಕ್ಷೆ, ಆರೋಗ್ಯ ಮತ್ತು ಸ್ವಚ್ಛತೆ ಜಾಗೃತಿ, ಕ್ರೀಡಾ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರು ಮಕ್ಕಳ ಮನಸ್ಸನ್ನು ಅರಿತು ಬೋಧಿಸಬೇಕು. ವಿದ್ಯಾರ್ಥಿಗಳು ಓದುವ ಸಮಯ ನಿಗದಿಪಡಿಸಿಕೊಂಡು ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಹೆಚ್ಚು ಬರೆಯುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಆಸಕ್ತಿಯಿಂದ ಓದಿದಾಗ ಒಳ್ಳೆಯ ಅಂಕ ಗಳಿಸಬಹುದು ಎಂದು ಹೇಳಿದರು.
ವೈದ್ಯ ಡಾ.ಸಂದೀಪ್ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಮುನ್ನಚ್ಚರಿಕೆ ಅವಶ್ಯ. ಪಾಲಕರು ಮಕ್ಕಳ ಕೈ ಮತ್ತು ಉಗುರುಗಳನ್ನು ಸ್ವಚ್ಛವಾಗಿಡಬೇಕು. ಕುಡಿಯಲು ಶುದ್ಧ ನೀರು ಉಪಯೋಗಿಸಬೇಕು. ನೈರ್ಮಲ್ಯ ಕಾಪಾಡಲು ಪ್ರತಿ ಮನೆಯಲ್ಲಿ ಶೌಚಗೃಹ ಬಳಸಬೇಕು. ಹಣ್ಣು, ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಬಳಸುವುದು ಸೂಕ್ತ. ಊಟದ ಮೊದಲು ಮತ್ತು ಶೌಚಗೃಹ ಬಳಸಿದ ನಂತರ ಕೈಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಕಾಯಿಲೆ ತಡೆಗೆ ಮುಂಜಾಗ್ರತೆ ವಹಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೂ ಗಮನಹರಿಸಬೇಕು. ಮಾತೃಭಾಷೆಯೊಂದಿಗೆ ಇಂಗ್ಲಿಷ್ ಚೆನ್ನಾಗಿ ಕಲಿಯಬೇಕು ಎಂದು ಹೇಳಿದರು
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಭೈರತಿ ಲಿಂಗರಾಜು, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಉದ್ಯಮಿ ಜೈರಾಮ್, ದೂರ ರಾಜಣ್ಣ, ಶ್ರೀಕಾಂತ್ ಕಶ್ಯಪ್, ಆನಂದ್ ದಯಾನಂದ, ಸುಚೇಂದ್ರ ಇತರರು ಇದ್ದರು.