- ಚನ್ನರಾಯಪಟ್ಟಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗುಣಮಟ್ಟ ಶಿಕ್ಷಣ ಸಿಗುವಂತಾಗಬೇಕಾದರೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವಾಗಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಎಸ್ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಶಿಕ್ಷಕರ ಕೊರತೆ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೂ ಭಾರೀ ಪರಿಣಾಮ ಬೀರುತ್ತಿದೆ.ಅತಿಥಿ ಶಿಕ್ಷಕರ ಮೂಲಕ ಕೊರತೆ ನೀಗಿಸುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡುತ್ತಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಹಾಗೂ ಬಡವರ್ಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು. ಶಿಕ್ಷಕರ ಕೊರತೆಯಿಂದ ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಈ ಕುರಿತು ಗಮನಹರಿಸಬೇಕಾಗಿದೆ. ಅಗತ್ಯವಿರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಪ ನಿರ್ದೇಶಕ ಕಚೇರಿಯ ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣಗೌಡ ಮಾತನಾಡಿ, ಶಿಕ್ಷಣ ಮತ್ತು ಶಿಕ್ಷಕರು ದೇಶದ ಅತ್ಯಂತ ಅಮೂಲ್ಯ ಆಸ್ತಿಗಳು. ಭಾರತ ಶ್ರೇಷ್ಠ ಗುರು ಪರಂಪರೆಯನ್ನು ಹೊಂದಿದೆ. ಜ್ಞಾನವು ಬಾಳನ್ನು ಬೆಳಗಿಸುವ ದೀಪದಂತೆ ಗುರುಗಳು ನಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ನಿರ್ದೇಶಕ ಡಿ.ಟಿ. ಪುಟ್ಟರಾಜು ಹಾಗೂ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಸೋಮನಾಥ್ ಹಾಗೂ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ತಹಸೀಲ್ದಾರ್ ಸಿ.ಜಿ. ಗೀತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್.ಜಿ.ಆರ್. ಕ್ಷೇತ್ರ ಶಿಕ್ಷಣಾಧಿಕಾರಿ ದೀಪ.ಎಚ್.ಎನ್, ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಎನ್.ಅನಿಲ್, ಪಿ.ಚೆಲುವನಾರಾಯಣಸ್ವಾಮಿ, ಮಹದೇವ್, ನಿರಂಜನ್, ದೇವರಾಜೇಗೌಡ, ಲಕ್ಷ್ಮೀನಾರಾಯಣ್, ಕೆ.ಟಿ.ನಾಗರಾಜು, ಎಚ್.ಎನ್. ಅನಿಲ್ ಕುಮಾರ್, ಕೆ.ವಿ.ಕಾಳೇಗೌಡ, ಮಂಜುಳಾ, ಆನಂದ್ ತಾಲೂಕಿನ ಶಿಕ್ಷಕರು ಇದ್ದರು.