ಬೀದರ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಹಾಗೂ ಪುನಶ್ವೇತನ ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಬನಸೋಡೆ, ಡಿಡಿಪಿಐ ಸಲೀಂ ಪಾಶಾ, ಶ್ರೀಧರ, ಗುರುರಾಜ ಶೆಟ್ಟಿ ಇದ್ದರು. 
ಜಿಲ್ಲೆ

ಮಕ್ಕಳ ಭವಿಷ್ಯ ಹಾಳು ಮಾಡಬೇಡಿ

ಬೀದರ್: ಜಿಲ್ಲೆಯಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳ ಆಧಾರ್ ವಿವರವನ್ನು ಸಾಫ್ಟವೇರ್‌ನಲ್ಲಿ ದಾಖಲಿಸದೇ ಇರುವುದಕ್ಕೆ ಮಕ್ಕಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಸಮರ್ಪಕ ಅನುಷ್ಠಾನದ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಹಾಗೂ ಪುನಶ್ವೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು ೩.೩೩ ಲಕ್ಷ ವಿದ್ಯಾರ್ಥಿಗಳಿದ್ದು, ಎಲ್ಲ ಮಕ್ಕಳ ಡಾಟ್‌ಬೇಸ್ ವಿವರ ದಾಖಲಾಗಬೇಕಿದೆ. ಮಕ್ಕಳ ಶಿಕ್ಷಣಕ್ಕೆ ಹಲವಾರು ಯೋಜನೆ ಹಮ್ಮಿಕೊಂಡಿದ್ದು, ಅವು ಸಾಕಾರಗೊಳ್ಳದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ಯಾವದೇ ಕಾರಣಕ್ಕೂ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಕ್ರಿಯಾಶೀಲರಾಗಿ ಪ್ರಾಮಾಣಿಕವಾಗಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸೇವೆ ಸಲ್ಲಿಸುವಂತೆ ತಾಕೀತು ಮಾಡಿದರು.

ಜಿಲ್ಲೆಯ ತೋರಣಾ ಹಾಗೂ ವಡಗಾಂವನಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತೀವ್ರ ಖಂಡನೀಯ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಸಜ್ಜಾಗಿ ಶಿಕ್ಷಕ ವೃತ್ತಿಗೆ ಗೌರವ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಹುಮನಾಬಾದ್‌ನಲ್ಲಿ ಮೂರು ಹಾಗೂ ಬೀದರ್ ತಾಲೂಕಿನಲ್ಲಿ ಒಂದು ಒಟ್ಟು ನಾಲ್ಕು ವಿದ್ಯಾರ್ಥಿಗಳು ಅಕಾಲಿಕ ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ಶಿಕ್ಷಣ ಇಲಾಖೆಯಿಂದ ದೊರೆಯಬೇಕಾದ ಒಂದು ಲಕ್ಷ ರೂ. ಧನ ಸಹಾಯವನ್ನು ಶೀಘ್ರವೇ ತಲುಪಿಸಬೇಕೆಂದು ಸೂಚಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೋಡೆ ಮಾತನಾಡಿ, ಶಿಕ್ಷಣ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಠೆ ಮಾಡದೇ ಇರುವುದು ವಿಷಾದನೀಯ. ಸಭೆಗೆ ಸಂಪೂರ್ಣ ಮಾಹಿತಿ ತರದೇ ನಿಷ್ಕಾಳಜಿ, ನಿರಾಸಕ್ತಿ ವಹಿಸಕೂಡದು, ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಬಾರದು. ಮಕ್ಕಳ ದೌರ್ಜನ್ಯ ಹಕ್ಕುಗಳ ಶೋಷಣೆ ಬಗ್ಗೆ ಶಿಕ್ಷಕರು ಸದಾ ಜಾಗೃತರಾಗಿ ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸಬೇಕೆಂದು ತಿಳಿಸಿದರು.

ಡಿಡಿಪಿಐ ಸಲೀಂ ಪಾಶಾ ಮಾತನಾಡಿ, ಜಿಲ್ಲಾಯಾದ್ಯಂತ ಬಾಕಿ ಉಳಿದಿರುವ ವಿದ್ಯಾರ್ಥಿಗಳ ಆಧಾರ್ ವಿವರ ದಾಖಲೀಕರಣ ಕಾರ್ಯ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗುರುರಾಜ ಶೆಟ್ಟಿ ಇತರರಿದ್ದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಹ ಮುಖ್ಯವಾಹಿನಿಗೆ ತರಲು ಸಿಆರ್‌ಸಿ, ಬಿಆರ್‌ಸಿ ತೀವ್ರ ಪ್ರಯತ್ನ ಮಾಡಬೇಕು. ಪ್ರತಿಯೊಂದು ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ ೨೦೧೬ ರನ್ವಯ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ ಅಂಟಿಸಬೇಕು. ದೂರು ಪೆಟ್ಟಿಗೆ, ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು.

| ಶಶಿಧರ ಕೋಸಂಬೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ