ಮೈಸೂರು: ಮಕ್ಕಳಿಗೂ ಹಕ್ಕಿಗೂ, ಮಕ್ಕಳಿಗೂ ಹೂವಿಗೂ ಒಂದು ವಿಶೇಷ ನಂಟಿರುತ್ತದೆ. ‘ಹಕ್ಕಿ ಹಾಡು’ ಮಕ್ಕಳ ಕಲರವ ಕಾರ್ಯಕ್ರಮ ಮಕ್ಕಳು ಮತ್ತು ಪರಿಸರದ ನಡುವೆ ಒಂದು ಅವಿನಾಭಾವ ಸಂಬಂಧವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಇದು ಈ ಕಾಲದ ಅವಶ್ಯಕತೆಗಳಲ್ಲಿ ಒಂದು ಎಂದು ಚಲನಚಿತ್ರ ನಟಿ ಭವ್ಯಾ ಅಭಿಪ್ರಾಯಪಟ್ಟರು.
ಡಾ. ಶ್ವೇತಾ ಮಡಪ್ಪಾಡಿ ನೇತೃತ್ವದ ಧ್ವನಿ ಫೌಂಡೇಷನ್ ಸಂಸ್ಥೆ ‘ರೋಟರಿ ಮೈಸೂರು ಆಂಗ್ಲ ಮಾಧ್ಯಮ ಶಾಲೆ’ ಸಹಯೋಗದೊಂದಿಗೆ ನಗರದಲ್ಲಿ ಆಯೋಜಿಸಿದ್ದ ‘ಹಕ್ಕಿ ಹಾಡು’ ಮಕ್ಕಳ ಬೇಸಿಗೆ ಕಲರವ 2025ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ. ಮಕ್ಕಳ ಮನಸು ಹಸಿ ಮಣ್ಣಿನಂತೆ. ಅವರ ಮನಸಿಗೆ ಯಾವ ಬೀಜವನ್ನು ಬಿತ್ತುತ್ತೇವೋ ಅದು ದೊಡ್ಡದಾಗಿ ಬೆಳೆಯುತ್ತದೆ. ಅದಕ್ಕಾಗಿ ನಾವು ಒಳ್ಳೆಯತನ ಎಂಬ ಬೀಜಗಳನ್ನು ಬಿತ್ತಬೇಕಿದೆ. ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಮೊದಲಾದವು ಮನಸನ್ನು ಮೃದುವಾಗಿಸಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಬಲ್ಲವು. ಹಕ್ಕಿಹಾಡು ಎಂಬ ಹೆಸರೇ ಪರಿಸರವನ್ನು ಸೂಚಿಸುತ್ತಿದೆ. ಅದುವೇ ವಿಶೇಷ ವಾಗಿದೆ ಎಂದು ತಿಳಿಸಿದರು.
ಇಂದು ನಡೆಯಲಿರುವ ಮಕ್ಕಳ ನಾಟಕ ಹಕ್ಕಿಹಾಡು ಎನ್ನುವ ಹೆಸರನ್ನು ಹೊಂದಿದೆ. ಮೊಬೈಲ್ನಂಥ ವಸ್ತುಗಳು ಹಕ್ಕಿಗಳ ಅಳಿವಿಗೆ ಕಾರಣ ಆಗಿರುವ ಈ ಹೊತ್ತಲ್ಲಿ ಹಕ್ಕಿಯ ಬಗೆಗಿನ ಪ್ರೀತಿಯನ್ನು ಹುಟ್ಟಿಸುವಂತಹ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ. ಈ ನಿಟ್ಟಿನಲ್ಲಿ ಶ್ವೇತಾ ಮಡಪ್ಪಾಡಿ ಅಭಿನಂದನಾರ್ಹರು ಎಂದರು.
ಪತ್ರಕರ್ತ ಬಿ.ಗಣಪತಿ ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಪ್ರೀತಿಯನ್ನು ಹುಟ್ಟು ಹಾಕುವ ಕೆಲಸವಾಗಬೇಕು. ಮಕ್ಕಳಿಗೆ ತಂದೆ ತಾಯಿಯ ಪ್ರೀತಿಯ ಕೊರತೆಯೂ ಇತ್ತೀಚೆಗೆ ಕಾಣತೊಡಗಿದೆ. ಮಕ್ಕಳು ಮೊಬೈಲ್ಗೆ ಅಂಟಿಕೊಂಡಿದ್ದಾರೆ. ನಾವು ಮಕ್ಕಳನ್ನು ಬೆಳೆಸುವ ವ್ಯವಧಾನ ಕಳೆಕೊಂಡಿದ್ದೇವೆ. ಶ್ವೇತಾ ಮಡಪ್ಪಾಡಿ ಮತ್ತು ತಂಡ ಕಳೆದ ಇಪ್ಪತ್ತು ದಿನಗಳಲ್ಲಿ ಮಕ್ಕಳ ಮನಸನ್ನು ಮೆದು ಮಣ್ಣಿನಂತೆ ಹದ ಮಾಡಿದ್ದಾರೆ. ಹೆತ್ತವರು, ಅದರಲ್ಲಿ ಒಳ್ಳೆಯತನ, ಒಳ್ಳೆಯ ವಿಚಾರಗಳ ಬೀಜವನ್ನು ಬಿತ್ತಬೇಕಾಗಿದೆ ಎಂದು ಹೇಳಿದರು.
ಭೀಮ ಜ್ಯುವೆಲರ್ಸ್ ಮೈಸೂರು ಶಾಖೆ ವ್ಯವಸ್ಥಾಪಕ ಅಕ್ಷಯ್ ಭಂಜನ್, ಸಂಸ್ಥೆ ಅಧ್ಯಕ್ಷ ಎಚ್.ಎಸ್. ವೆಂಕಟೇಶ್, ಸಂಸ್ಥಾಪಕಿ ಡಾ. ಶ್ವೇತಾ ಮಡಪ್ಪಾಡಿ, ಕಾರ್ಯದರ್ಶಿ ಪ್ರಸಾದ್ ಮೈಸೂರು ಇತರರು ಇದ್ದರು.
ಶಿಬಿರದಲ್ಲಿ ಭಾಗವಹಿಸಿದ್ದ 40 ಮಕ್ಕಳಿಗೆ ಭೀಮ ಜ್ಯುವೆಲರ್ಸ್ ಮೈಸೂರು ವತಿಯಿಂದ ನೆನಪಿನ ಕಾಣಿಕೆ, ಉಡುಗೊರೆ ನೀಡಲಾಯಿತು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ದಿಗ್ವಿಜಯ ಹೆಗ್ಗೋಡು ನಿರ್ದೇಶನದಲ್ಲಿ ‘ಹಕ್ಕಿಹಾಡು’ ನಾಟಕ ಪ್ರದರ್ಶನವಾಯಿತು.