ಜಿಲ್ಲೆ

ಮಕ್ಕಳ ಬುದ್ಧಿಶಕ್ತಿ ಉತ್ತೇಜಿಸುವ ಆಟ ಚೆಸ್

ಮೈಸೂರು: ವಿಜಯ ವಿಠಲ ವಿದ್ಯಾಸಂಸ್ಥೆ ಹಾಗೂ ಫಸ್ಟ್ ಮೂವ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ‘ಕರ್ನಾಟಕ ರಾಜ್ಯ ಸ್ಕೂಲ್ಸ್ ಚೆಸ್ ಚಾಂಪಿಯನ್‌ಶಿಪ್’ಗೆ ಶುಕ್ರವಾರ ಚಾಲನೆ ನೀಡಲಾಯಿತು.
ವಿಜಯ ವಿಠಲ ಶಾಲೆಯ ಆವರಣದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಚೆಸ್ ಸಂಘದ ಕಾರ್ಯದರ್ಶಿ ಅರವಿಂದ ಶಾಸ್ತ್ರಿ, ಚೆಸ್ ಮಕ್ಕಳ ಬುದ್ಧಿಶಕ್ತಿಯನ್ನು ಉತ್ತೇಜಿಸುವ ಆಟವಾಗಿದೆ. ಕೇವಲ ಪಾಠಗಳನ್ನು ಕಂಠಪಾಠ ಮಾಡುವ ಬದಲು, ಚೆಸ್ ಆಟದಲ್ಲಿ ತೊಡಗಿಸಿಕೊಂಡರೆ ಯೋಚನಾ ಶಕ್ತಿ ಬೆಳೆಯುತ್ತದೆ. ಆದ್ದರಿಂದ ಇಂತಹ ಆಟಗಳನ್ನು ಉತ್ತೇಜಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಮಾತ್ರವಲ್ಲ ಸಹಪಠ್ಯ ಚಟುವಟಿಕೆಗಳು ಅಷ್ಟೇ ಮುಖ್ಯ. ನಮ್ಮ ಶಾಲೆಯಲ್ಲಿ ಶಿಕ್ಷಣದ ಜತೆ ಜತೆಯಲ್ಲೇ ಚೆಸ್ ಅನ್ನು ಕೂಡ ಅಳವಡಿಸಲಾಗಿದೆ ಎಂದು ತಿಳಿಸಿದರು.
ಚೆಸ್‌ನಲ್ಲಿ ಸಾಧನೆ ಮಾಡಿದ ಕರ್ನಾಟಕದ ಆರನೇ ಇಂಟರ್ ನ್ಯಾಷನಲ್ ಆರ್ಬಿಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎನ್.ಜೆ. ಅನಿಲ್, ಕಾಮನ್ ವೆಲ್ತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರಸಿದ್ಧಿ ಭಟ್ ಅವರನ್ನು ಸನ್ಮಾನಿಸಲಾಯಿತು. ಒಟ್ಟು 12 ವಿಭಾಗದಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ 400 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಮೈಸೂರು ಜಿಲ್ಲಾ ಚೆಸ್ ಸಂಘದ ಕಾರ್ಯದರ್ಶಿ ನಾಗೇಂದ್ರ ಮುರಳೀಧರ್, ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲೆ ಎಸ್.ಎ.ವೀಣಾ, ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಪ್ರಸಾದ್, ಫಸ್ಟ್ ಮೂವ್ ಟ್ರಸ್ಟ್ ಅಧ್ಯಕ್ಷ ರವಿಕಿರಣ್, ಕಾರ್ಯದರ್ಶಿ ಎಂ. ಭರತ್ ಇತರರು ಇದ್ದರು.