ಜಿಲ್ಲೆ

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸುವ ಕೆಲಸವಾಗಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರಿಗೆ ಮಾತ್ರವಲ್ಲದೆ ಪಾಲಕರಿಗೂ ಇರಬೇಕು ಎಂದು ಶಾಸಕ ಅಮೃತ ದೇಸಾಯಿ ಅಭಿಪ್ರಾಯಪಟ್ಟರು.
ನಗರದ ಕಲಾಶಕ್ತಿ ಪ್ರತಿಷ್ಠಾನ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಕಲಾಶಕ್ತಿ ಉತ್ಸವ, ವಿಜಯಶ್ರೀ, ಕಲಾಶಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭೆ ಗುರುತಿಸದ ಕಾರಣ ಎಷ್ಟೋ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಪಠ್ಯಗಳ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಮಕ್ಕಳನ್ನು ಪ್ರೇರೇಪಿಸಿದಾಗಲೇ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದರು.
ಸಮಾಜ ಸೇವಕ ಬಸವರಾಜ ಮಲಕಾರಿ ಮಾತನಾಡಿ, ಮಕ್ಕಳಿಗೆ ಕಲಾ ಶಕ್ತಿ ಪ್ರಶಸ್ತಿಯು ಅವರ ಸಾಧನೆಗೆ ಸಂದ ಗೌರವ. ವಿವಿಧ ಕ್ಷೇತ್ರಗಳ ಸಾಧಕರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರ ನಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಮಕ್ಕಳಿಗೆ ಕಲೆಗಳಲ್ಲಿ ಆಸಕ್ತಿ ಮೂಡಿಸಿ, ಸದೃಢ ಮನಸ್ಸು ನಿರ್ಮಾಣ ಮಾಡಲು ಪೂರಕ ವಾತಾವರಣ ಕಲ್ಪಿಸಬೇಕು. ಮಕ್ಕಳ ಮನದಲ್ಲಿ ಧನಾತ್ಮಕ ಚಿಂತನೆ ತುಂಬಿದಾಗ ಉತ್ತಮ ಪ್ರಜೆಗಳಾಗುತ್ತಾರೆ. ಇಂತಹ ಕಾರ್ಯವನ್ನು ಕಲಾಶಕ್ತಿ ಪ್ರತಿಷ್ಠಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹೋರಾಟಗಾರ ಸುರೇಶ ಗೋಕಾಕ ಅವರಿಗೆ ‘ವಿಜಯಶ್ರೀ’ ಪ್ರಶಸ್ತಿ, ಕಲಾ ಶಕ್ತಿ ಪ್ರಶಸ್ತಿಯನ್ನು ಪವನಕುಮಾರ ಹಿಟ್ಟಣಗಿ, ದಕ್ಷಾ ಕಾಮತ, ಮಯೂರಿ ಜೋಶಿ, ಸಮೃದ್ದಿ ಯಾತಗಿರಿ, ಶುಭಂ ಮನ್ನಿಕೇರಿ, ಆದಿತ್ಯ ಜೆ.ಜಾ, ಆಕಾಶ ಸಾಸ್ವಿಹಳ್ಳಿ, ಗಗನ ಬೆಟಗೇರಿಗೆ ನೀಡಿ ಗೌರವಿಸಲಾಯಿತು.
ಪಾಲಿಕೆ ಮಾಜಿ ಸದಸ್ಯರಾದ ಸಿ.ಎಸ್. ಪಾಟೀಲ, ಶ್ರೀಶೈಲ ಚಾಂದಕವಟೆ, ಹೇಮಾಕ್ಷಿ ಕಿರೇಸೂರ, ಡಾ.ಪ್ರಕಾಶ ಮಲ್ಲಿಗವಾಡ, ಕಲಾಶಕ್ತಿ ಪ್ರತಿಷ್ಠಾನದ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ, ಸೈಯದ ಎ.ಎಂ, ಅವಿನಾಶ, ಸುನೀಲ ಅರಳಿಕಟ್ಟಿ, ಕೃಷ್ಣಾ ಎಸ್, ಶ್ರೀನಿವಾಸ ಇಂಚರ, ಗೋಪಾಲ ಉಣಕಲ್, ಮೈಲಾರಿ ಕರಿಗಾರ, ಸಂದೀಪ ಯಾದಗಿರಿ, ಅಮೃತಾ ಪಾಟೀಲ, ವೆಂಕಟೇಶ ಮನ್ನಿಕೇರಿ, ಶಕ್ತಿ ಹಿರೇಮಠ, ಶಶಿಕಲಾ ಹೆಬ್ಳೀಕರ, ಇತರರು ಇದ್ದರು.
ಮಲ್ಲನಗೌಡ ಪಾಟೀಲ ಸ್ವಾಗತಿಸಿದರು. ಪೂಜಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿತ್ ಹಬೀಬ ನಿರೂಪಿಸಿದರು.