ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸಿ ಸಮಾಜಕ್ಕೆ ಪರಿಚಯಿಸಿ

ಹನಗೋಡು: ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಯೊಂದಿಗೆ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸಲು ಶಿಕ್ಷಕರ ಪಾತ್ರ ಅಗತ್ಯ ಎಂದು ಶಿಕ್ಷಣ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ (ಅಭಿವೃದ್ಧಿ) ಗೀತಾಂಬ ತಿಳಿಸಿದರು.


ಹನಗೋಡು ಹೋಬಳಿ ನೇರಳಕುಪ್ಪೆ ಪ್ರೌಢಶಾಲಾ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಹನಗೋಡು ಹೋಬಳಿಯ ಪ್ರೌಢಶಾಲಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಕಲಿಕಾ ಹಂತದಲ್ಲಿಯೇ ಜಾನಪದ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು. ಈ ಉದ್ದೇಶದಿಂದ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು.


ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ತೋರಲು ಇದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.


ನಿವೃತ್ತ ಶಿಕ್ಷಣಾಧಿಕಾರಿ ಬಿ.ಕೆ.ಶಿವಣ್ಣ, ಮುಖ್ಯ ಶಿಕ್ಷಕ ಕುಮಾರಸ್ವಾಮಿ, ಪುರುಷೋತ್ತಮ್ ಮಾತನಾಡಿದರು. ಬಿಆರ್‌ಸಿ ಸಂತೋಷ್‌ಕುಮಾರ್, ಗ್ರಾಪಂ ಅಧ್ಯಕ್ಷ ಉದಯ್, ಉಪಾಧ್ಯಕ್ಷೆ ಜವರಮ್ಮ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್, ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ಗೀತಾ, ಜಿ.ಬಿ.ಹರೀಶ್, ರಾಮಕೃಷ್ಣ, ಕೇಶವಮೂರ್ತಿ, ರವಿ, ತಾಪಂ ಮಾಜಿ ಸದಸ್ಯ ಗಣಪತಿ, ಗ್ರಾಪಂ ಸದಸ್ಯೆ ಗೀತಾ ಸುರೇಶ್, ಮಾಜಿ ಸದಸ್ಯರಾದ ಆನಂದ್, ಸಣ್ಣ ತಮ್ಮೇಗೌಡ, ಪಿಡಿಒ ದೇವರಾಜ್ ಇದ್ದರು. ಹೋಬಳಿ ವ್ಯಾಪ್ತಿಯ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.