ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಚಿತ್ರದುರ್ಗ: ಪೋಷಕರು ತಮ್ಮ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದು ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಸಲಹೆ ನೀಡಿದರು.

ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಶುಕ್ರವಾರ ರೋಟರಿ ಕ್ಲಬ್ ಚಿನ್ಮೂಲಾದ್ರಿ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಹದಿಹರೆಯದ ವಯಸ್ಸಿನಲ್ಲಿ ಹೆಚ್ಚು ನಿಗಾವಹಿಸಬೇಕು. ಸಾಮಾಜಿಕ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಬೇಕು. ದೇಶ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆಯನ್ನ ಯಾವುದೇ ಪಾಲಕರು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಜವಾಬ್ದಾರಿ ಅರಿತು ಪ್ರತಿಯೊಬ್ಬ ನೌಕರರು ಹೆಚ್ಚು ಒತ್ತು ನೀಡಿದರೆ ರಾಷ್ಟ್ರದ ಪ್ರಗತಿ ಇನ್ನಷ್ಟು ವೇಗ ಪಡೆಯಲಿದೆ. ಬಡತನದಲ್ಲಿ ಜನಿಸಿ ಬಡವನಾಗಿ ಸಾಯುವಂತೆ ಯಾವ ದೇವರು ಹೇಳಿಲ್ಲ. ಸತತ ಪರಿಶ್ರಮದ ಮೂಲಕ ಶ್ರೀಮಂತರಾಗಲು ಸಾಧ್ಯವಿದೆ. ಅದಕ್ಕಾಗಿ ಸುಶಿಕ್ಷಿತರಾಗಬೇಕಿದೆ ಎಂದರು.

ಮಕ್ಕಳಲ್ಲಿ ಯಾವುದರ ಕುರಿತು ಆಸಕ್ತಿ ಇದೆಯೋ ಅದಕ್ಕೆ ಹೆಚ್ಚು ಒತ್ತು ನೀಡಬೇಕು. ಬಲವಂತ ಮಾಡದೆಯೇ ಉತ್ತೇಜಿಸಬೇಕು. ಗುರಿಯೊಂದಿಗೆ ಸಾಗುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಸಾಧಕರಾಗಿ ಹೊರಹೊಮ್ಮಿ. ಜಿಲ್ಲೆ, ರಾಜ್ಯ, ಪೋಷಕರಿಗೆ ವಿದ್ಯಾರ್ಥಿಗಳು ಕೀರ್ತಿ ತರಬೇಕು ಎಂದರು.
ಕ್ಲಬ್‌ನ ಅಧ್ಯಕ್ಷ ಅರುಣ್‌ಕುಮಾರ್, ಅಸಿಸ್ಟಂಟ್ ಗೌವರ್ನರ್ ಗಾಯತ್ರಿ ಶಿವರಾಂ, ಕಾರ್ಯದರ್ಶಿ ಶ್ರೀನಿವಾಸ್, ಶಿವರಾಂ, ಸುರೇಂದ್ರಬಾಬು ಇತರರಿದ್ದರು.