ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಮಕ್ಕಳು 
ಜಿಲ್ಲೆ

ಮಕ್ಕಳ ದಿನಾಚರಣೆ ಹಿನ್ನೆಲೆ: ಮೈಸೂರಿನಲ್ಲಿ ಚಿಣ್ಣರ ಚಿಲಿಪಿಲಿ

ಮೈಸೂರು: ಪ್ರತಿನಿತ್ಯ ಪಾಠ, ಪ್ರವಚನ, ಪರೀಕ್ಷೆ ಹಾಗೂ ಭಾರವಾದ ಶಾಲಾ ಬ್ಯಾಗ್‌ಗಳ ಹೊರೆ ಹೊತ್ತು ಸಾಗುವ ಮಕ್ಕಳು ಶನಿವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಈ ಎಲ್ಲ ಹೊರೆಗಳಿಂದ ಮುಕ್ತವಾಗಿ ಸಂಭ್ರಮಿಸಿದರು. ತರಗತಿಯ ನಾಲ್ಕು ಗೋಡೆಗಳ ನಡುವೆ ಕುಳಿತು ಪಾಠ ಕೇಳುವ ಬದಲು, ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಾ, ಆಟವಾಡುತ್ತಾ, ನಲಿಯುತ್ತಾ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಿದರು.

ಮಕ್ಕಳ ದಿನಾಚರಣೆಯ ಅಂಗವಾಗಿ ನಗರದ ಮೈಸೂರು ಮೃಗಾಲಯ ಹಾಗೂ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಶನಿವಾರ ಮಕ್ಕಳದ್ದೇ ಕಲರವ. ಬೆಳಗ್ಗೆಯಿಂದಲೇ ಶಾಲಾ ಸಮವಸ್ತ್ರ ಧರಿಸಿ, ಗೆಳೆಯರೊಂದಿಗೆ ಗುಂಪು ಗುಂಪಾಗಿ ಆಗಮಿಸಿದ ಮಕ್ಕಳು ಎರಡೂ ಸ್ಥಳಗಳಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದರು. ಎಲ್ಲೆಲ್ಲೂ ಮಕ್ಕಳ ನಗು, ಕೇಕೆ, ಚಪ್ಪಾಳೆ, ಕುತೂಹಲದ ಮಾತುಗಳೇ ಕೇಳಿಬರುತ್ತಿದ್ದವು.

ಮಕ್ಕಳ ದಿನಾಚರಣೆ ಪ್ರಯುಕ್ತ ಮೈಸೂರು ಮೃಗಾಲಯದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಶಾಲಾ ಸಮವಸ್ತ್ರ ಧರಿಸಿ, ಗುರುತಿನ ಚೀಟಿ ಹೊಂದಿದ್ದ ಮಕ್ಕಳಿಗೆ ಉಚಿತ ಪ್ರವೇಶದ ಅವಕಾಶ ನೀಡಲಾಗಿತ್ತು. ಈ ಸೌಲಭ್ಯವನ್ನು ಸದುಪಯೋ ಗಪಡಿಸಿಕೊಂಡ ವಿವಿಧ ಶಾಲೆಗಳ ನೂರಾರು ಮಕ್ಕಳು ಮೃಗಾಲಯಕ್ಕೆ ಭೇಟಿ ನೀಡಿದರು.

ಮೃಗಾಲಯದ ಒಳಗೆ ಕಾಲಿಡುತ್ತಿದ್ದಂತೆಯೇ ಮಕ್ಕಳಲ್ಲಿ ಹೊಸ ಲೋಕವನ್ನೇ ಕಂಡ ಸಂಭ್ರಮ. ಪಂಜರದೊಳಗೆ ಓಡಾಡುತ್ತಿದ್ದ ಹುಲಿ, ಸಿಂಹಗಳನ್ನು ಕಂಡಾಗ ಕೆಲವರ ಕಣ್ಣುಗಳಲ್ಲಿ ಅಚ್ಚರಿ ಮೂಡಿದರೆ, ಜಿರಾಫೆ, ಜೀಬ್ರಾ, ಆನೆ, ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಕಂಡ ಮಕ್ಕಳು ಗೆಳೆಯರನ್ನು ಕರೆದು ತೋರಿಸುತ್ತಾ ಖುಷಿಪಟ್ಟರು. ಮಂಗಗಳ ಚೇಷ್ಟೆ, ಪಕ್ಷಿಗಳ ಕಲರವ, ಪ್ರಾಣಿಗಳ ವಿಭಿನ್ನ ಚಲನವಲನಗಳನ್ನು ಕಂಡು ಮಕ್ಕಳು ನಗೆಗಡಲಲ್ಲಿ ತೇಲಿದರು.

ಪ್ರಾಣಿಗಳ ಬಗ್ಗೆ ಶಿಕ್ಷಕರು ನೀಡುತ್ತಿದ್ದ ಮಾಹಿತಿಯನ್ನು ಆಸಕ್ತಿಯಿಂದ ಆಲಿಸುತ್ತಾ, ಅವುಗಳ ಹೆಸರು, ಆಹಾರ ಪದ್ಧತಿ, ಸ್ವಭಾವದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದರು. ಪುಸ್ತಕದಲ್ಲಿ ಓದಿದ್ದ ಪ್ರಾಣಿಗಳನ್ನು ನೇರವಾಗಿ ನೋಡುವ ಅವಕಾಶ ದೊರೆತಿದ್ದು ಮಕ್ಕಳಿಗೆ ವಿಶೇಷ ಅನುಭವ ನೀಡಿತು.

ಇತ್ತ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿಯೂ ಚಿಣ್ಣರ ಸಂಭ್ರಮಕ್ಕೆ ಕೊರತೆಯಿರಲಿಲ್ಲ. ಮಕ್ಕಳ ದಿನಾಚರಣೆಯ ಅಂಗವಾಗಿ ವಸ್ತು ಪ್ರದರ್ಶನಕ್ಕೆ ಆಗಮಿಸಿದ ಮಕ್ಕಳಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಮಕ್ಕಳನ್ನು ಬರಮಾಡಿಕೊಂಡು ಎಲ್ಲರಿಗೂ ಕಿತ್ತಳೆ ಹಣ್ಣು ವಿತರಿಸಲಾಯಿತು. ಇದೇ ಸ್ಥಳದಲ್ಲಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಐಸ್‌ಕ್ರೀಂ ವಿತರಿಸಿದ್ದು, ಮಕ್ಕಳ ಸಂತಸವನ್ನು ಇಮ್ಮಡಿಗೊಳಿ ಸಿತು.

ಕೈಯಲ್ಲಿ ಕಿತ್ತಳೆ ಹಣ್ಣು, ಐಸ್‌ಕ್ರೀಂ ಹಿಡಿದು ಗೆಳೆಯರೊಂದಿಗೆ ನಗುತ್ತಾ, ಹರಟುತ್ತಾ ಸಾಗಿದ ಮಕ್ಕಳು ವಸ್ತು ಪ್ರದರ್ಶನದ ವಿವಿಧ ಮಳಿಗೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ಆಟಿಕೆಗಳು, ವಿವಿಧ ಪ್ರದರ್ಶನಗಳು ಹಾಗೂ ಆಕರ್ಷಕ ವಸ್ತುಗಳನ್ನು ಕಂಡು ಸಂಭ್ರಮಿಸಿದರು. ಎಂದಿನ ಶಾಲಾ ದಿನಗಳ ಗಡಿಬಿಡಿ, ಪಾಠದ ಒತ್ತಡ ಮರೆತು ತಮ್ಮದೇ ಲೋಕದಲ್ಲಿ ವಿಹರಿಸಿದರು.

ಇದೇ ಸಂದರ್ಭ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವೇಷಭೂಷಣಗಳನ್ನು ಧರಿಸಿ ಆಗಮಿಸಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.