ಜಿಲ್ಲೆ

ಮಕ್ಕಳ ದತ್ತು ಸ್ವೀಕಾರಕ್ಕೆ ಹೆಚ್ಚಿದ ಬೇಡಿಕೆ: ಕಾಡುತ್ತಿದೆ ಅನಾಥ ಮಕ್ಕಳ ಕೊರತೆ

ಮಂಜುನಾಥ ತಿಮ್ಮಯ್ಯ ಮೈಸೂರು

ಮಗುವಿಗಾಗಿ ಹಂಬಲಿಸುವ ದಂಪತಿಗಳು ಮಕ್ಕಳ ದತ್ತು ಸ್ವೀಕಾರಕ್ಕೆ ಹಾತೊರೆಯುತ್ತಿದ್ದಾರೆ. ಇದರಿಂದಾಗಿ ಇದಕ್ಕೂ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಮಕ್ಕಳು ಲಭ್ಯ ಇಲ್ಲ..!

ಕೆಲವು ದಂಪತಿಗಳಿಗೆ ಪರಿಸ್ಥಿತಿ ಹಾಗೂ ಕಾರಣಾಂತರಗಳಿಂದ ಸ್ವಂತ ಮಕ್ಕಳನ್ನು ಹೊಂದುವ ಭಾಗ್ಯ ಇರುವುದಿಲ್ಲ. ಅಂಥವರ ಆಸೆ ಪೂರೈಸಲೆಂದೇ ಇರುವುದು ‘ಮಕ್ಕಳ ದತ್ತು ಸ್ವೀಕಾರ’ ಯೋಜನೆ. ಇದು ದತ್ತು ಪಡೆಯುವ ದಂಪತಿಗಷ್ಟೇ ಅಲ್ಲ, ಅನಾಥ ಮಗುವೊಂದಕ್ಕೆ ಅಪ್ಪ-ಅಮ್ಮನ ಸಾಂಗತ್ಯ ಕಲ್ಪಿಸಲು ಸಹಕಾರಿಯೂ ಆಗಿದೆ.

ಅನಾಥ, ನಿರ್ಗತಿಕ ಮಕ್ಕಳಿಗೆ ಉತ್ತಮ ಕೌಟುಂಬಿಕ ವಾತಾವರಣ ಕಲ್ಪಿಸಿ, ತಂದೆ-ತಾಯಿ ಪ್ರೀತಿ, ವಾತ್ಸಲ್ಯ, ರಕ್ಷಣೆ ಒದಗಿಸಿ ಅವರ ಮುಂದಿನ ಭವಿಷ್ಯ ರೂಪಿಸುವುದು, ಮಕ್ಕಳಿ ಇಲ್ಲದವರಿಗೆ ‘ಸಂತಾನ ಇಲ್ಲ’ ಎಂಬ ಕೊರಗನ್ನು ನೀಗಿಸಿ, ಜೀವನದಲ್ಲಿ ಉತ್ಸಾಹ ತುಂಬಲು, ಪಾಲಕತ್ವ ಜವಾಬ್ದಾರಿ ಮತ್ತು ಧನ್ಯತೆ ದೊರಕುವಂತೆ ಮಾಡುವುದು ದತ್ತು ಸ್ವೀಕಾರ ಯೋಜನೆ ಆಶಯ. ದತ್ತು ಸ್ವೀಕಾರ ಪದ್ಧತಿಯನ್ನು ಸರ್ಕಾರವು ಕಾನೂನು ವ್ಯಾಪ್ತಿಗೆ ತಂದು ನಿಯಮ ರೂಪಿಸಿರುವುದೂ ಇದಕ್ಕೆ ಸಾಕಷ್ಟು ಪುಷ್ಟಿ ನೀಡಿದೆ.

ಮಕ್ಕಳನ್ನು ಹೊಂದಿರದ ಪಾಲಕರು ಅನಾಥ ಮಕ್ಕಳನ್ನು ದತ್ತು ಪಡೆಯಲು ನಿಯಮದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜಗತ್ತಿನ ಯಾವುದೇ ದೇಶದ ಪ್ರಜೆ ಬೇಕಾದರೂ ಯಾವುದೇ ದೇಶದ ಮಗುವನ್ನು ದತ್ತು ಪಡೆಯಬಹುದು. 2012ರಿಂದ ದತ್ತು ಯೋಜನೆ ಜಾರಿಯಲ್ಲಿದೆ. 2015ರಿಂದ ಇದಕ್ಕೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆಗೆ ಅವಕಾಶ ಒದಗಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಅರ್ಜಿ

ದತ್ತು ಸ್ವೀಕಾರಕ್ಕಾಗಿ ರಾಜ್ಯದಲ್ಲಿ ಅಂದಾಜು 3,500 ಅರ್ಜಿ ಸ್ವೀಕೃತವಾಗಿವೆ. ಈ ಪೈಕಿ ಮೈಸೂರು ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಅರ್ಜಿಗಳು ಬಂದಿವೆ. ಇವುಗಳ ಸಂಖ್ಯೆ ಅಂದಾಜು 180 ದಾಟಿದೆ. ಆದರೆ, ಬೇಡಿಕೆಗೆ ತಕ್ಕಂತೆ ಅನಾಥ ಮಕ್ಕಳು ದೊರೆಯುತ್ತಿಲ್ಲ. ಹೀಗಾಗಿ, ದಂಪತಿಗಳು ಮಗುವಿಗಾಗಿ ವರ್ಷಗಳಟ್ಟಲೇ ಕಾಯುವಂತಾಗಿದೆ.

ಅರ್ಜಿ ಸಲ್ಲಿಸಿ ಮೂರುವರೆ ವರ್ಷ ಕಾಯುವಿಕೆ ಕಡ್ಡಾಯವಾಗಿದೆ. ಬಳಿಕ ಜ್ಯೇಷ್ಠತೆ ಆಧಾರದ ಮೇಲೆ ಮಕ್ಕಳನ್ನು ಸ್ವೀಕಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅನಾಥ ಮಕ್ಕಳನ್ನು ಸರ್ಕಾರದಿಂದ ಅಧಿಕೃತ ಪರವಾನಿಗೆ ಪಡೆದ ದತ್ತು ಸಂಸ್ಥೆಯು ಪೋಷಿಸಬಹುದಾಗಿದೆ.

ಜಿಲ್ಲೆಯಲ್ಲಿ ನಾಡನಹಳ್ಳಿಯ ಪೊಲೀಸ್ ಬಡಾವಣೆಯಲ್ಲಿರುವ ಸರ್ಕಾರಿ ವಿಶೇಷ ದತ್ತು ಕೇಂದ್ರ ಮತ್ತು ಜಯನಗರದಲ್ಲಿರುವ ಶ್ರೀ ಛಾಯಾದೇವಿ ವಿಶೇಷ ದತ್ತು ಕೇಂದ್ರಗಳು ಈ ಅವಕಾಶ ಪಡೆದುಕೊಂಡಿವೆ.

ಸ್ವದೇಶಿ ದತ್ತುವನ್ನು ಪ್ರೋತ್ಸಾಹಿಸಲು ಮತ್ತು ವಿದೇಶಿ ದತ್ತುವನ್ನು ಅನುಷ್ಠಾನಗೊಳಿಸಲು ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿಯು ದತ್ತು ಪ್ರಕ್ರಿಯೆ ಒಳಗೊಂಡಂತೆ ಅಸಾಂಸ್ಥಿಕ ಸೇವೆಗಳ ಸಂಯೋಜನೆ ಹಾಗೂ ಮೇಲ್ವಿಚಾರಣೆ ನಡೆಸುತ್ತದೆ.

ಕುಟುಂಬ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿ ಮಗುವಿನ ಹಕ್ಕು. ಕುಟುಂಬ ವಾತಾವರಣವು ಮಗುವಿಗೆ ಅಗತ್ಯವಾದ ಪ್ರೀತಿ ಮತ್ತು ಕಾಳಜಿ ಹೊಂದಲು ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ ಮಕ್ಕಳಿಗೆ ಪುನರ್ವಸತಿಗೆ ಸಹಾಯ ಮಾಡುವ ಕಾನೂನುಬದ್ಧ ಕಾರ್ಯಕ್ರಮ. ದತ್ತು ಸ್ವೀಕಾರ ಕಾರ್ಯಕ್ರಮವು ಮಕ್ಕಳಿಗೆ ಶಾಶ್ವತ ಕುಟುಂಬ ವ್ಯವಸ್ಥೆ ಒದಗಿಸಲು ಸಹಾಯ ಮಾಡುತ್ತದೆ.

38 ಚಿಣ್ಣರ ದತ್ತು ಸ್ವೀಕಾರ:

ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ 38 ಮಕ್ಕಳನ್ನು ದತ್ತು ನೀಡಲಾಗಿದೆ. ಈ ಪೈಕಿ 6 ಅನಾಥ ಮಕ್ಕಳು ವಿದೇಶ ಸೇರಿಕೊಂಡಿದ್ದಾರೆ. ರಾಜ್ಯದೊಳಗೆ 9 ಮಕ್ಕಳನ್ನು ದತ್ತು ನೀಡಲಾಗಿದೆ. 23 ಮಕ್ಕಳು ಅನ್ಯ ರಾಜ್ಯಗಳ ಪಾಲಕರ ಆಶ್ರಯ ಸಿಕ್ಕಿದೆ.

ಪ್ರಸ್ತುತ ಪೊಲೀಸ್ ಬಡಾವಣೆಯ ಸರ್ಕಾರಿ ವಿಶೇಷ ದತ್ತು ಕೇಂದ್ರದಲ್ಲಿ 7 ಮಕ್ಕಳು, ಜಯನಗರದ ಶ್ರೀ ಛಾಯಾದೇವಿ ವಿಶೇಷ ದತ್ತು ಕೇಂದ್ರದಲ್ಲಿ 22 ಮಕ್ಕಳು ಸೇರಿದಂತೆ 29 ಮಕ್ಕಳು ಜಿಲ್ಲೆಯಲ್ಲಿದ್ದು, ದತ್ತು ಪ್ರಕ್ರಿಯೆ ಪ್ರಗತಿಯಲ್ಲಿ ಇದೆ.

ಮಮತೆಯ ತೊಟ್ಟಿಲು:

ಅನಾಥ, ಪರಿತ್ಯಕ್ತ, ಕಳ್ಳಸಾಗಾಣಿಕೆಗೆ ಗುರಿಯಾಗುವ ಮತ್ತು ಹೆತ್ತವರಿಗೆ ಬೇಡವಾದ ಮಕ್ಕಳು ತಂದು ಬಿಡಲು ಮಮತೆಯ ತೊಟ್ಟಿಲು ಸ್ಥಾಪಿಸಲಾಗಿದೆ. ಮಕ್ಕಳನ್ನು ಇದರಲ್ಲಿ ತಂದು ಬಿಡುವವರ ಮಾಹಿತಿಯ ಗೌಪ್ಯತೆ ಕಾಪಾಡಲಾಗುವುದು.

ಇಂತಹ ಮಕ್ಕಳ ಪಾಲನೆ ಮತ್ತು ರಕ್ಷಣೆ ಮಾಡಿ, ಅವರಿಗೆ ಕಾನೂನುಬದ್ಧ ದತ್ತು ಕಾರ್ಯಕ್ರಮದ ಮೂಲಕ ಕುಟುಂಬ ಒದಗಿಸುವುದು ಇದರ ಉದ್ದೇಶ. ಮಮತೆಯ ತೊಟ್ಟಿಲುಗಳನ್ನು ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಕಚೇರಿ, ವಿಶೇಷ ದತ್ತು ಸಂಸ್ಥೆಗಳ ಮುಂಭಾಗಗಳಲ್ಲಿ ಮಕ್ಕಳನ್ನು ಸ್ವೀಕರಿಸಲು ಇರಿಸಲಾಗಿದೆ.

ಹೆಣ್ಣು ಮಕ್ಕಳ ಕಡೆಗೆ ಹೆಚ್ಚು ಒಲವು:

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ದತ್ತು ಸ್ವೀಕಾರಕ್ಕೆ ಹಲವು ಪಾಲಕರು ಹೆಚ್ಚು ಒಲವು ತೋರುತ್ತಾರೆ. ಹೀಗಾಗಿ, ಹೆಣ್ಣು ಮಕ್ಕಳಿಗೆ ಹೆಚ್ಚು ಬೇಡಿಕೆ. ವಯಸ್ಸಾದಾಗ ಹೆಣ್ಣು ಮಕ್ಕಳೇ (ಗಂಡು ಮಕ್ಕಳಿಗಿಂತ) ಚೆನ್ನಾಗಿ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಭಾವಿಸುವವವರೇ ಅಧಿಕ ಜನರಿದ್ದಾರೆ.

ಹೀಗಾಗಿ ಹೆಣ್ಣು ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆಗೆ ಡಿಮಾಂಡ್ ಬಂದಿದೆ. ಮದುವೆಯಾದ ದಂಪತಿ 5 ವರ್ಷಗಳವರೆಗೆ ಮಕ್ಕಳಾಗುತ್ತದೆಯೇ ಎಂದು ಕಾಯುತ್ತಾರೆ. ಹಲವು ಯತ್ನಗಳ ನಂತರವೂ ಸಂತಾನ ಆಗದಿದ್ದರೆ ದತ್ತು ಪಡೆಯಲು ಮುಂದಾಗುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಅನಾಥ ಮಕ್ಕಳ ದತ್ತು ಸ್ವೀಕಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆಸಕ್ತಿ ಇರುವ ದಂಪತಿಗಳು ಅರ್ಜಿ ಸಲ್ಲಿಸಿ ವರ್ಷಗಟ್ಟಲೇ ಕಾಯುತ್ತಿದ್ದಾರೆ. ಆದರೆ, ಮಕ್ಕಳು ಲಭ್ಯ ಇಲ್ಲ. ಎನ್.ಟಿ.ಯೋಗೇಶ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೈಸೂರು