ಜಿಲ್ಲೆ

ಮಕ್ಕಳ ದತ್ತು ಪ್ರಕ್ರಿಯೆ ನಿಯಮ ಬದ್ಧವಾಗಿರಲಿ

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆದು ಪರಿಪಾಲನೆ ಮಾಡಬೇಕು. ಅನಧಿಕೃತವಾಗಿ ದತ್ತು ಪಡೆಯುವುದು ಅಪರಾಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ತಿಳಿಸಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಸೋಮವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಸ್ಕೋ ಸಂಸ್ಥೆ ಹಾಗೂ ಸಂದೀಪ್ ಸೇವಾ ನಿಲಯಂ ಸಹಯೋಗದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಹಿಂದೆ ಸಂಬಂಧಿಕರು ಅಥವಾ ತಮಗೆ ಬೇಕಾದವರ ಬಳಿ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದರು. ಈಗ ಕಾನೂನು ಬದಲಾಗಿದೆ. ಎಲ್ಲವೂ ಕಾನೂನಿನ ಪ್ರಕಾರವೇ ಮಾಡಬೇಕಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಕೇವಲ ಸಂಬಂಧಿಕರ ತಮ್ಮ ಹತ್ತಿರದವರ ಮಕ್ಕಳನ್ನು ಮಾತ್ರವಲ್ಲದೆ ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಜಾರಿಗೆ ಬಂದಿದೆ. ಇದಕ್ಕೆ ಕಾನೂನಿನ ಪ್ರಕ್ರಿಯೆ ಅಗತ್ಯ ಎಂದರು.

ದತ್ತು ಮಾಸಾಚರಣೆ ಹಿನ್ನೆಲೆಯಲ್ಲಿ ದತ್ತು ಸ್ವೀಕಾರ ಕುರಿತು ಪ್ರತಿಜ್ಞೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ಹೇಮಾಲತ, ನಿರ್ಮಲಾ, ಸುಜಾತಾ ಉಪಸ್ಥಿತರಿದ್ದರು.

ಕಾನೂನು ಅರಿತು ಬಾಳಿ: ನಾವು ಕಾನೂನು ಪ್ರಕಾರವೇ ಎಲ್ಲ ಕೆಲಸಗಳನ್ನು ಮಾಡಬೇಕು. ಕೆಲವೊಂದು ವೇಳೆ ತಪ್ಪುಗಳನ್ನು ಮಾಡಿದಾಗ ಕಾನೂನು ಗೊತ್ತಿರಲಿಲ್ಲ ಎನ್ನುತ್ತಾರೆ. ಇಂತಹ ತಪ್ಪುಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಕಾನೂನನ್ನು ಅರಿತು ಬಾಳಬೇಕು. ಆಗ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಮಕ್ಕಳನ್ನು ದತ್ತು ತೆಗೆದುಕೊಳ್ಳುವ ವೇಳೆ ನಾವು ಕಾನೂನನ್ನು ಅನುಸರಿಸಬೇಕು ಎಂದು ಬಾಸ್ಕೋ ಸಂಸ್ಥೆ ಸಂಪನ್ಮೂಲ ಕೆ.ಓಬಳೇಶ್ ಸಲಹೆ ನೀಡಿದರು.