ಹೊಳೆನರಸೀಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದ ಯೂನಿಟ್‌ಗಳನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಉದ್ಘಾಟಿಸಿದರು. ಡಾ. ಧನ್ಶೇಖರ್, ಡಾ.ಅಜಯ್, ಡಾ.ವಿನಯ್, ಡಾ.ಲೋಕೇಶ್ ಇದ್ದರು. 
ಜಿಲ್ಲೆ

ಮಕ್ಕಳ ತೀವ್ರ ನಿಗಾ ಘಟಕ ಉದ್ಘಾಟನೆ

ಹೊಳೆನರಸೀಪುರ: ಪಟ್ಟಣದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕದ ಯೂನಿಟ್‌ಗಳನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸ್ತ್ರೀ ರೋಗತಜ್ಞ ಡಾ.ಲಕ್ಷ್ಮೀಕಾಂತ್ ಶುಕ್ರವಾರ ಉದ್ಘಾಟಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂವರು ಸ್ತ್ರೀ ರೋಗ ತಜ್ಞರು, ಇಬ್ಬರು ಮಕ್ಕಳ ತಜ್ಞರಿದ್ದಾರೆ. ಪ್ರತಿ ತಿಂಗಳು 150ಕ್ಕೂ ಹೆಚ್ಚು ಹೆರಿಗೆಗಳಾಗುತ್ತಿದ್ದು, ಇದರಲ್ಲಿ ಶೇ.20 ರಷ್ಟು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಕೆಲವೊಮ್ಮೆ ಅವಧಿಗೆ ಮುನ್ನ ಜನಿಸಿದ ಮಕ್ಕಳಿಗೆ ಉಸಿರಾಟದ ಸಮಸ್ಯೆ ಇರುತ್ತದೆ. ಅಂತಹವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಇದರಿಂದ ತಾಯಂದಿರಿಗೆ ತೊಂದರೆ ಆಗುತ್ತಿತ್ತು. ಈ ಬಗ್ಗೆ ಶಾಸಕ ಎಚ್.ಡಿ. ರೇವಣ್ಣ ಅವರ ಗಮನ ಸೆಳೆದಾಗ ಅವರು ಸರ್ಕಾರದ ಮೇಲೆ ಒತ್ತಡ ಹೇರಿ 20 ಲಕ್ಷ ರೂ. ವೆಚ್ಚದ 11 ಐಸಿಯು ಮಕ್ಕಳ ಬೆಡ್ ಸೌಲಭ್ಯ ಕೊಡಿಸಿದ್ದಾರೆ. ಇದರಿಂದ ಅವಧಿಗೆ ಮುನ್ನ ಜನಸಿದ ಮಕ್ಕಳಿಗೆ ಇಲ್ಲಿಯೇ ಚಿಕಿತ್ಸೆ ಕೊಡಿಸಬಹುದು ಎಂದು ಡಾ.ಲಕ್ಷ್ಮೀಕಾಂತ್ ತಿಳಿಸಿದರು.

ಮಕ್ಕಳ ತಜ್ಞ ಡಾ.ಧನ್ಶೇಖರ್, ಡಾ.ಅಜಯ್, ಶಸ್ತ್ರಚಿಕಿತ್ಸಾ ತಜ್ಞ ಡಾ.ವಿನಯ್, ಡಾ.ಲೋಕೇಶ್, ಶುಶ್ರೂಶಕಿಯರಾದ ಮಾಲತಿ, ಕವಿತಾ, ಗೌರಮ್ಮ, ಪಂಕಜಾ, ರೇಖಾ ಇದ್ದರು.