ಕೆಂಭಾವಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಶಶಿಧರ ಕೋಸಂಬೆ ನೇತೃತ್ವದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿ ವಿದ್ಯಾರ್ಥಿನಿಯರ ಜತೆ ಮಧ್ಯಾಹ್ನದ ಬಿಸಿಯೂಟ ಸವಿದರು. ಅಧಿಕಾರಿಗಳಾದ ಗೋವಿಂದ ರಾಠೋಡ್, ಅನಿಲಕುಮಾರ ಕಾಂಬ್ಳೆ, ಚೆನ್ನಪ್ಪಗೌಡ ಚೌದ್ರಿ, ಸಿದ್ದಯ್ಯ ಹಿರೇಮಠ ಇದ್ದರು. 
ಜಿಲ್ಲೆ

ಮಕ್ಕಳ ಜತೆ ಬಿಸಿಯೂಟ ಮಾಡಿದ ಸದಸ್ಯರು

ಕೆಂಭಾವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಶಶಿಧರ ಕೋಸಂಬೆ ನೇತೃತ್ವದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ಇತ್ತೀಚೆಗೆ ಈ ಶಾಲೆಯಲ್ಲಿ ಬಿಸಿಯೂಟದಲ್ಲಿ ಹಲ್ಲಿ ಬಿದ್ದು ಅನೇಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದ ಹಿನ್ನೆಲೆಯಲ್ಲಿ ಆಯೋಗದ ಭೇಟಿ ಮಹತ್ವ ಪಡೆದಿದೆ. ಬಿಸಿಯೂಟ ಮಾಡಿದ ನಂತರ ಕೋಸಂಬೆ ಮಾತನಾಡಿ, ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಘಟನೆ ಕುರಿತು ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಈವರೆಗೆ ಆಯೋಗಕ್ಕೆ ಯಾವುದೇ ಮಾಹಿತಿ ನೀಡದ್ದರಿಂದ ಇಂದು ಖುದ್ದು ಭೇಟಿ ನೀಡಲಾಗಿದೆ ಎಂದರು.

ಶಾಲೆ ಸ್ಥಿತಿಗತಿ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಅಗತ್ಯ ಕಂಡು ಬಂದರೆ ಸುಮೊಟೊ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾನೂನಿನ ಮೊರೆ ಹೋಗಲಾಗುವುದು ಎಂದು ಹೇಳಿದರು.

ನಂತರ ಸಂಜೀವ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿಲಕುಮಾರ ಕಾಂಬ್ಳೆ, ತಾಲೂಕು ಹಿಂದುಳಿದ ವರ್ಗಗಗಳ ಕಲ್ಯಾಣಾಧಿಕಾರಿ ಚೆನ್ನಪ್ಪಗೌಡ ಚೌದ್ರಿ, ಸಿದ್ದಯ್ಯ ಹಿರೇಮಠ, ಪ್ರಭಾರಿ ಮುಖ್ಯಗುರು ಸ್ಮೀತಾ ಬಿರಾದಾರ, ಸಿಆರ್‌ಪಿ ಈರಯ್ಯ ಹಿರೇಮಠ, ಬಿಸಿಯೂಟದ ಸ್ಥಾನಿಕ ನೋಡಲ್ ಅಧಿಕಾರಿ ಯಮುನೇಶ ಯಾಳಗಿ ಇದ್ದರು.