ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಎಂ.ಆರ್. ಮಂಜುನಾಥ್ ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿದರು. ಶಿವರಾಜು, ಮಹದೇವ, ಗುರುಸ್ವಾಮಿ, ಗಿರೀಶ್, ಕಿರಣ್‌ಕುಮಾರ್ ಇತರರು ಇದ್ದರು. 
ಜಿಲ್ಲೆ

ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿ

ಹನೂರು: ಶಿಕ್ಷಕರು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಸಾಧನೆಗೈಯಲು ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಬುಧವಾರ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಯುವಕರಲ್ಲಿ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಮೆಚ್ಚುಗೆಯ ಸಂಗತಿ. ಆದ್ದರಿಂದ ಶಿಕ್ಷಕರು ಶಾಲಾ ಹಂತದಲ್ಲೇ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಬೇಕು. ಜತೆಗೆ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿರುವುದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದಂತಾಗುತ್ತದೆ ಎಂದರು.

ಉತ್ತಮ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಂಬಂಧ ಸಂಬಂಧಪಟ್ಟ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಆದ್ದರಿಂದ ಸೆ.15ರೊಳಗೆ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೆಚ್ಚುಗೆ ಪಡೆದ ಏರೋಬಿಕ್ಸ್ ನೃತ್ಯ: ಮೈಸೂರು ಶೈಕ್ಷಣಿಕ ವಿಭಾಗೀಯ ಮಟ್ಟದಲ್ಲೇ ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟಣದ ಶ್ರೀ ವಿವೇಕಾನಂದ, ಕ್ರಿಸ್ತರಾಜ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಜಿ.ವಿ ಗೌಡ, ಬಿಎಂಜಿ, ಮುರಾರ್ಜಿ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಯ 1,250 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಪ್ರದರ್ಶನವಾದ ಏರೋಬಿಕ್ ನೃತ್ಯ ಹಾಗೂ ಸಾಮೂಹಿಕ ವ್ಯಾಯಾಮ ಮೆಚ್ಚುಗೆ ಗಳಿಸಿತು.

ಇದಕ್ಕೂ ಮುನ್ನ ಶಾಸಕ ಎಂ.ಆರ್.ಮಂಜುನಾಥ್ ಕ್ರೀಡಾಜ್ಯೋತಿ ಬೆಳಗಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಪಥಸಂಚನಲ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಪಪಂ ಸದಸ್ಯರಾದ ಪವಿತ್ರ, ಆನಂದ್, ಬಿಇಒ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಹದೇವ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಮಲ್‌ದಾಸ್, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು ಇತರರು ಇದ್ದರು.