ಜಿಲ್ಲೆ

ಮಕ್ಕಳ ಕೈಗೆ ಬೈಕ್ ಕೊಡಬೇಡಿ

ಔರಾದ್: ಮಕ್ಕಳ ಕೈಗೆ ಬೈಕ್ ಸೇರಿ ವಾಹನ ಚಲಾಯಿಸಲು ನೀಡಬಾರದು. ಇದು ಕಾನೂನಿನ ಪ್ರಕಾರ ಅಪರಾಧ. ಪಾಲಕರು ಈ ವಿಷಯವನ್ನು ಗಂಭೀರ ಪರಿಗಣಿಸಬೇಕು. ಮಕ್ಕಳಿಗೆ ಬೈಕ್ ನೀಡದೆ ಅವರನ್ನು ಅಪಘಾತದಿಂದ ದೂರವಿರಿಸಿ ಎಂದು ಭಾಲ್ಕಿ ಉಪ ವಿಭಾಗದ ಡಿವೈಎಸ್ಪಿ ಡಾ. ದೇವರಾಜ್ ಹೇಳಿದರು.

ತಾಲೂಕಿನ ಜೋಜನಾ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ, ಗಣರಾಜ್ಯೋತ್ಸವ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೈಕ್ ಓಡಿಸುವವರು ಕಡ್ಡಾಯ ಹೆಲ್ಮೆಟ್ ಧರಿಸಬೇಕು. ಕಾಲಕಾಲಕ್ಕೆ ತಕ್ಕಂತೆ ವಾಹನಗಳ ವಿಮೆ ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲನೆ ಮಾಡಲು ಕೋರಿದರು.

ಜೋಜನಾ ಗ್ರಾಮದಲ್ಲಿ ಹಾಳು ಬಿದ್ದ ಸ್ಥಳ ಸ್ವಚ್ಛಗೊಳಿಸಿ ಅಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿ, ಗಾಂಧೀಜಿಯವರು ಕಂಡ ಕನಸು ಸ್ವಚ್ಛತೆ ಮೂಲಕ ಹಸನುಮಾಡಿ ನನಸಾಗಿಸಿರುವುದು ಸಂತಸ ತಂದಿದೆ. ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮಾಡಿದ ಕೆಲಸ ಅಭಿವೃದ್ಧಿಗೆ ಬುನಾದಿಯಾಗಿದೆ ಎಂದು ಹೇಳಿದರು.

ತಾಪಂ ಇಒ ಮಾಣಿಕರಾವ ಪಾಟೀಲ್ ಮಾತನಾಡಿದರು. ಮುಖ್ಯ ಗುರು ಸವಿತಾ ಉಪನ್ಯಾಸ ನೀಡಿದರು. ಬೀದರ್ ಬಸವಗಿರಿ ಲಿಂಗಾಯತ ಮಹಾಮಠದ ಶ್ರೀ ಪ್ರಭುದೇವರು, ತಾಪಂ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ, ಶಿವಾನಂದ ಔರಾದೆ, ಪಿಡಿಒ ಸಂತೋಷ ಪಾಟೀಲ್, ಮಲ್ಲಿಕಾರ್ಜುನ ಡೋಣಿ, ಪಿಎಸ್ಐ ಪ್ರಭಾಕರ ಪಾಟೀಲ್, ಘಾಳರೆಡ್ಡಿ ಮುಂಗೆ, ಜಗದೀಶ್ ಬುಟ್ಟೆ, ರಾಚಮ್ಮ ಮಾಶೆಟ್ಟೆ, ವೀರೇಶ ಮಾಶೆಟ್ಟೆ ಇತರರಿದ್ದರು. ಈ ವೇಳೆ ಗ್ರಾಪಂ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.