ಕೋಲಾರ: ಕರೊನಾ ಮೂರನೇ ಅಲೆ ಆತಂಕದ ನಡುವೆಯೂ 9 ಮತ್ತು 10ನೇ ತರಗತಿಗೆ ಭೌತಿಕ ತರಗತಿ ಆರಂಭಿಸಿರುವ ಸರ್ಕಾರ ಮಕ್ಕಳ ಕೈಗೆ ಇನ್ನೂ ಹೊಸ ಪಠ್ಯಪುಸ್ತಕಗಳನ್ನು ನೀಡಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಶೇ 53.33 ಮಾತ್ರ ಸರಬರಾಜು ಆಗಿದೆ.
ರಾಜ್ಯದಲ್ಲಿ ಕರೊನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9ರಿಂದ ಪಿಯುಸಿವರೆಗೆ ಭೌತಿಕ ತರಗತಿ ಆರಂಭವಾಗಿದೆ. 1ರಿಂದ 10ನೇ ತರಗತಿವರೆಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಪಠ್ಯಗಳನ್ನು ಮುದ್ರಿಸಿ ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿದೆ.
ಶೈಕ್ಷಣಿಕ ವರ್ಷಾರಂಭವಾಗುವ ಜೂನ್ ತಿಂಗಳೊಳಗೆ ಪಠ್ಯಪುಸ್ತಕ ಸರಬರಾಜು ಮಾಡಬೇಕಿತ್ತು. ಕರೊನಾ ಲಾಕ್‌ಡೌನ್ ಇನ್ನಿತರ ಕಾರಣದಿಂದಾಗಿ ಮುದ್ರಣಕ್ಕೆ ತೊಂದರೆ ಆಗಿದ್ದರೂ ಆಗಸ್ಟ್ ಅಂತ್ಯವಾಗುತ್ತಾ ಬಂತು, ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸರಬರಾಜು ಮತ್ತು ವಿತರಣೆ ಕಾರ್ಯ ನಡೆದಿಲ್ಲ.
ಜಿಲ್ಲೆಯ ಬೇಡಿಕೆ: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸೇರಿ ಒಟ್ಟು 16,65,659 ಪುಸ್ತಕಗಳ ಬೇಡಿಕೆ ಇದೆ. ಈ ಪೈಕಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು12,42,160 ಪುಸ್ತಕಗಳು, ಖಾಸಗಿ ಶಾಲೆಗಳಲ್ಲಿ ಮಾರಾಟಕ್ಕೆ 3,67,528 ಪುಸ್ತಕಗಳು ಹಾಗೂ ಆರ್‌ಟಿಇ ಅಡಿಯಲ್ಲಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ವಿತರಿಸುವ ಸಲುವಾಗಿ 55,971 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.
ಶೇ.53 ಸರಬರಾಜು: ಆ. 26ವರೆಗೆ ಅನ್ವಯಿಸುವಂತೆ ಮುದ್ರಣಕಾರರಿಂದ ಜಿಲ್ಲೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಸಲುವಾಗಿ 7,54,629 ಪುಸ್ತಕಗಳು, ಮಾರಾಟಕ್ಕೆ 1,62,953 ಪುಸ್ತಕಗಳು ಸೇರಿ ಒಟ್ಟು 9,17,564 ಪುಸ್ತಕಗಳು ಶೇ 53.33 ಸರಬರಾಜು ಆಗಿದೆ. ರಾಜ್ಯಾದ್ಯಂತ ಸರಬರಾಜು ಆಗಬೇಕಿರುವ ಬಾಕಿ ಪುಸ್ತಕಗಳನ್ನು ಸೆ. 15ರೊಳಗೆ ಪೂರೈಸುವ ಬಗ್ಗೆ ಇತ್ತೀಚೆಗೆ ಶಿಕ್ಷಣ ಸಚಿವರ ಜತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭರವಸೆ ವ್ಯಕ್ತವಾಗಿರುವುದರಿಂದ ಪಠ್ಯಪುಸ್ತಕಗಳ ನಿರೀಕ್ಷೆಯಲ್ಲಿ ಮಕ್ಕಳಿದ್ದಾರೆ.
ಈಗಾಗಲೆ ಪಠ್ಯಪುಸ್ತಕಗಳು ಆಯಾ ತಾಲೂಕುಗಳಿಗೆ ನೇರವಾಗಿ ಸರಬರಾಜಾಗಿದ್ದು, ಬಿಇಒಗಳು ತಮ್ಮ ಹಂತದಲ್ಲಿ ಆಯಾ ಶಾಲೆಗಳಿಗೆ, ಮಕ್ಕಳಿಗೆ ವಿತರಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೋಲಾರ ತಾಲೂಕಿಗೆ ಸರಬರಾಜು ಆಗಿರುವ ಶೇ.51ರಷ್ಟು ಪುಸ್ತಕಗಳನ್ನು ಆಯಾ ಶಾಲೆ ಬಾಗಿಲಿಗೆ ವಾಹನದಲ್ಲಿ ತಲುಪಿಸಲು ವ್ಯವಸ್ಥೆ ಮಾಡಿದ್ದು, ಆ. 30ರಿಂದ ಪಠ್ಯಪುಸ್ತಕಗಳು ದಾಸ್ತಾನು ಕೊಠಡಿಯಿಂದ ಶಾಲೆಗಳಿಗೆ ರವಾನೆಯಾಗಲಿದೆ. ಆಯಾ ಶಾಲಾ ಹಂತದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಲಿದೆ.
ಬುಕ್ ಬ್ಯಾಂಕ್: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರತಿವರ್ಷ ಬುಕ್ ಬ್ಯಾಂಕ್ ಮಾಡಲಾಗುತ್ತಿದೆ. ಮುಂದಿನ ತರಗತಿಗೆ ಉತ್ತೀರ್ಣರಾಗಿ ಹೋಗುವ ಮಕ್ಕಳಿಂದ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಸರಿಯಾಗಿ ತೆರೆಯದಿರುವುದರಿಂದ ಸ್ವಲ್ಪ ಹಿನ್ನಡೆಯಾದರೂ ಒಂದಷ್ಟು ಮಕ್ಕಳಿಂದ ಪಠ್ಯಪುಸ್ತಕ ಪಡೆಯುವಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಗಿದೆ. ಹೀಗಾಗಿ ಈ ವರ್ಷ ಇನ್ನೂ ಹೊಸ ಪಠ್ಯಪುಸ್ತಕ ಮಕ್ಕಳ ಕೈ ಸೇರದಿದ್ದರೂ ಮಕ್ಕಳಿಗೆ ಹಳೆಯ ಪುಸ್ತಕ ನೀಡಿರುವುದರಿಂದ ಅಭ್ಯಾಸಕ್ಕೆ ತೊಂದರೆಯಾಗಿಲ್ಲ ಎನ್ನುತ್ತಾರೆ ಶಿಕ್ಷಕರು.
ಜಿಲ್ಲೆಯಲ್ಲಿ 9 ಮತ್ತು 10ನೇ ತರಗತಿಗೆ ಭೌತಿಕ ತರಗತಿಗಳು ಆರಂಭಗೊಂಡಿರುವುದರಿಂದ ಜಿಲ್ಲೆಗೆ ಸರಬರಾಜು ಆಗಿರುವ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳಿಗೆ ವಿತರಿಸಿ ಮಕ್ಕಳಿಗೆ ನೀಡಲಾಗಿದೆ. ಉಳಿಕೆ ಪುಸ್ತಕಗಳು ಸರಬರಾಜು ಆದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಎಸ್.ಜಿ.ನಾಗೇಶ್, ಡಿಡಿಪಿಐ ಕೋಲಾರ ಜಿಲ್ಲೆಗೆ ಸರಬರಾಜು ಆಗಿರುವ ಪಠ್ಯಪುಸ್ತಕಗಳನ್ನು ಆ. 30ರೊಳಗೆ ಆಯಾ ತಾಲೂಕುಗಳಲ್ಲಿ ಶಾಲೆಗಳಿಗೆ ಸರಬರಾಜು ಮಾಡಿ ಬಿಇಒ, ಕ್ಲಸ್ಟರ್ ಹಂತದಲ್ಲಿ ಮಕ್ಕಳಿಗೆ ತಲುಪಿಸುವಂತೆ ನಿರ್ದೇಶನ ನೀಡಲಾಗಿದೆ. ಬಂಗಾರಪೇಟೆಯಲ್ಲಿ ಶೇ.100ರ ಸಾಧನೆ ಆಗಿದೆ. ಗಾಯತ್ರಿ, ನೋಡಲ್ ಅಧಿಕಾರಿ, ಪಠ್ಯಪುಸ್ತಕ ವಿಭಾಗ ಕೋಲಾರ