ಮೇಲುಕೋಟೆ: ಶಿಕ್ಷಕರ ಪ್ರತಿಭೆ ಮಕ್ಕಳ ಮೂಲಕ ಪ್ರತಿಭಾಕಾರಂಜಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಅಭಿಪ್ರಾಯಪಟ್ಟರು.
ಮೇಲುಕೋಟೆಯ ಎಸ್.ಇ.ಟಿ ಪಬ್ಲಿಕ್ ಶಾಲೆಯಲ್ಲಿ ನಡೆದ ಮೇಲುಕೋಟೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಇಲಾಖೆ ಮಕ್ಕಳ ಪ್ರತಿಭಾ ವಿಕಾಸಕ್ಕೆ ಪ್ರತಿಭಾಕಾರಂಜಿಯನ್ನು ವೇದಿಕೆಯಾಗಿ ಕಲ್ಪಿಸಿದೆ. ಪ್ರತಿಭಾವಂತ ಶಿಕ್ಷಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಪಡೆಯುವುದಲ್ಲ. ಗ್ರಾಮದ ಮುಖಂಡರನ್ನು ಮನವೊಲಿಸಿ ಶಾಲಾ ಹಂತದಲ್ಲಿ ವಿಜೇತರಾಗುವ ಮಕ್ಕಳಿಗೂ ಬಹುಮಾನ ಕೊಡಿಸಲು ಶಿಕ್ಷಕರು ಮುಂದಾಗಬೇಕು. ಕ್ಲಸ್ಟರ್ ಹಂತದಿಂದ ರಾಜ್ಯ ಮಟ್ಟದವರೆಗೆ ಇಲಾಖೆಯೇ ಬಹುಮಾನ ನೀಡುತ್ತದೆ ಎಂದು ತಿಳಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ವೆಂಕಟರಾಮೇಗೌಡ ಮಾತನಾಡಿ, ಶಾಲಾ ಹಂತದಲ್ಲೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಅವರಲ್ಲಿರುವ ಸುಪ್ತಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಕರು ಮತ್ತು ಪಾಲಕರು ಮಾಡಬೇಕು ಎಂದರು.
ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ನೂರಾರು ಪುಟಾಣಿಗಳು ಭಾಗವಹಿಸಿದ್ದರು. ಛದ್ಮವೇಷ, ಕ್ಲೇಮಾಡಲಿಂಗ್, ಕಂಠಪಾಠ, ಚಿತ್ರಕಲೆ, ಅಭಿನಯಗೀತೆ ಹೀಗೆ ಹಲವು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಪುಟಾಣಿಗಳು ಉತ್ಸಾಹದಿಂದ ಭಾಗಿಯಾಗಿದ್ದರು.
ಎಸ್.ಇ.ಟಿ ಶಿಕ್ಷಣ ಸಂಸ್ಥೆಗಳ ರಿಜಿಸ್ಟಾರ್ ನಿಂಗೇಗೌಡ, ಮುಖ್ಯಶಿಕ್ಷಕ ಶಿವಕುಮಾರ್ ಸಿಆರ್‌ಪಿ ಬೆಟ್ಟಸ್ವಾಮಿಗೌಡ ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್, ಯದುಶೈಲ ಪ್ರೌಢಶಾಲೆ ಮುಖ್ಯಶಿಕ್ಷಕ ವಸಂತಕುಮಾರ್, ನಿವೃತ್ತಶಿಕ್ಷಕ ನರಸಿಂಹೇಗೌಡ, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಸೇರಿದಂತೆ ಎಲ್ಲ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಇದ್ದರು.