ಕೋಲಾರದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಗೆ ಬಿಇಒ ಕನ್ನಯ್ಯ ಚಾಲನೆ ನೀಡಿದರು. ಅಕ್ಷರದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಉಪಪ್ರಾಂಶುಪಾಲ ವೆಂಕಟೇಶಪ್ಪ, ಬಾಲಕರ ಪಿಯು ಕಾಲೇಜು ಪ್ರಾಂಶುಪಾಲೆ ರಾಧಮ್ಮ ಇತರರು ಇದ್ದರು.  
ಜಿಲ್ಲೆ

ಮಕ್ಕಳ ಕಲಿಕೆಗೆ ಪೂರಕವಾಗಲಿದೆ ಮೊಟ್ಟೆ

ಕೋಲಾರ: ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಜತೆಗೆ ಗೈರು ತಪ್ಪಿಸಿ ಕಲಿಕೆಯತ್ತ ಗಮನಹರಿಸುವಂತೆ ಮಾಡುವಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ ಮಹತ್ವವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಜಿಪಂ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ವತಿಯಿಂದ ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ೧ ರಿಂದ ೮ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ನೀಡುತ್ತಿದ್ದು, ಪ್ರೌಢಶಾಲೆಯ ೯ ಮತ್ತು ೧೦ನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡಬೇಕು ಎಂಬ ಬೇಡಿಕೆ ಇತ್ತು. ಆ ಬೇಡಿಕೆಯನ್ನು ಸರ್ಕಾರ ಈಡೇರಿಸಿದ್ದು, ಎಲ್ಲ ಸರ್ಕಾರಿ ಶಾಲೆ ಮಕ್ಕಳಿಗೂ ವಾರಕ್ಕೆರಡು ದಿನ ಈ ಸೌಲಭ್ಯ ಸಿಗುತ್ತಿದೆ ಎಂದರು.
ಹಸಿವು ಇದ್ದಾಗ ಪಾಠ ಅರ್ಥವಾಗದು. ಮಕ್ಕಳು ಆರೋಗ್ಯವಂತರಗಿದ್ದರೆ ಓದಿನಲ್ಲಿ ಮುಂದೆ ಬರುತ್ತಾರೆಂಬುದು ಸರ್ಕಾರದ ಆಶಯವಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್, ಪಠ್ಯಪುಸ್ತಕ, ಬಿಸಿಯೂಟ, ಕ್ಷೀರಭಾಗ್ಯದ ಜತೆಗೆ ಮೊಟ್ಟೆ ನೀಡುತ್ತಿರುವುದು ಸರ್ಕಾರಿ ಶಾಲೆಗಳ ಬಲವರ್ಧನೆ ಜತೆಗೆ ಮಕ್ಕಳ ಹಾಜರಾತಿ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಹೇಮಲತಾ ಮಾತನಾಡಿ, ಬಿಸಿಯೂಟದ ಜತೆ ಮೊಟ್ಟೆಯೂ ಸಿಗುತ್ತಿದ್ದು, ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುವ ಮೂಲಕ ಶಾಲೆಗೆ ಮತ್ತಷ್ಟು ರ‍್ಯಾಂಕ್‌ಗಳು ಬರುವಂತಾಗಲಿ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಲಿ ಎಂದು ಹಾರೈಸಿದರು.
ಅಕ್ಷರದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ಮಕ್ಕಳು ಶಾಲೆಗೆ ಗೈರಾಗುವುದನ್ನು ತಪ್ಪಿಸಲು ಸರ್ಕಾರ ಅನೇಕ ಕಾರ್ಯಕ್ರಮ ನೀಡುತ್ತಿದೆ. ಇದೀಗ ಮೊಟ್ಟೆ ವಿತರಣೆಯೂ ಆ ಸಾಲಿಗೆ ಸೇರಿದ್ದು, ಇದು ಶೈಕ್ಷಣಿಕ ಪ್ರಗತಿಯ ಜತೆಗೆ ಮಕ್ಕಳಿಗೆ ಹೊಟ್ಟೆ ಹಸಿವು ನೀಗಿಸಿ ಅವರಲ್ಲಿ ಕಲಿಕಾ ಹಸಿವು ಹೆಚ್ಚಾಗಲಿದೆ. ಇನ್ನುಮುಂದೆ ಇನ್ನೂ ಹೆಚ್ಚಿನ ಸಾಧಕರು ಹೊರಬರಲಿ ಎಂದು ಆಶಿಸಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಸುಮಾರು ೧೦ ವರ್ಷ ಹಲವು ಸ್ವಯಂಸೇವಾ ಸಂಸ್ಥೆಗಳು ನಡೆಸಿದ ಹೋರಾಟದ ಫಲವಾಗಿ ಬಿಸಿಯೂಟ ಕಾರ್ಯಕ್ರಮ ಜಾರಿಗೆ ಬಂದಿತು. ಮೊಟ್ಟೆ ವಿತರಣೆಗೆ ಹಲವರಿಂದ ವಿರೋಧವಿತ್ತು. ಕೊನೆಗೆ ಶೇ.೮೦ ರಷ್ಟು ಮಕ್ಕಳು ಮೊಟ್ಟೆ ವಿತರಣೆಗೆ ಒಲವು ತೋರಿದ್ದರಿಂದ ಈಗ ಅದು ಸಾಕಾರಗೊಂಡಿದೆ. ಮಕ್ಕಳಲ್ಲಿ ಅಪೌಷ್ಠಿಕತೆ ದೂರವಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಗಲಿ ಎಂದು ಹೇಳಿದರು.
ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಉಪಪ್ರಾಂಶುಪಾಲ ವೆಂಕಟೇಶಪ್ಪ, ಬಾಲಕರ ಪಿಯು ಕಾಲೇಜು ಪ್ರಾಂಶುಪಾಲೆ ರಾಧಮ್ಮ ಮಾತನಾಡಿದರು.
ಬಿಇಒ ಕನ್ನಯ್ಯ ಮತ್ತಿತರರು ಮಕ್ಕಳೊಂದಿಗೆ ಕುಳಿತು ಸಹಭೋಜನ ಮಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ಬಿಸಿಯೂಟ ಯೋಜನೆಯ ಹೇಮಂತ್, ಉಪನ್ಯಾಸಕರಾದ ಗೋಪಿಕೃಷ್ಣನ್, ಅಶ್ವಥ್ಥ್, ರಾಮಚಂದ್ರಪ್ಪ, ಶಿಕ್ಷಕರಾದ ಲೋಕೇಶಪ್ಪ ದಟ್ಟೇರ್, ತೊಟ್ಲಿ ರಮೇಶ್, ಎನ್.ಎಸ್.ಭಾಗ್ಯಾ, ಪಣಿಮಲ್ಲಾರ್, ಮುಕುಂದ, ಮಂಜುಳಾ, ಕೌಸರ್, ವಿಜಯಕುಮಾರ್, ನಾರಾಯಣಸ್ವಾಮಿ, ವಿಜಯಲಕ್ಷ್ಮೀ, ಸಂತೋಷಕುಮಾರಿ, ವೀಣಾ, ಫೀರ್‌ದೋಸ್‌ಪಾತಿಮಾ, ಅಶಿಕಾ ಸುಲ್ತಾನಾ, ಮಾಧವರಾವ್, ಶಿಕ್ಷಕ ರಾಜಣ್ಣ ಇದ್ದರು.