ಹಾಸನ: ಚದುರಂಗ ಕ್ರೀಡೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಅನುಕೂಲವಾಗಲಿದ್ದು, ಇದು ಅವರ ಭವಿಷ್ಯಕ್ಕೆ ಭದ್ರ ಬುನಾದಿ ಆಗಲಿದೆ ಎಂದು ಎವಿಕೆ ಪಿಯು ಕಾಲೇಜು ಪ್ರಾಂಶುಪಾಲರಾದ ಎಚ್.ಎಸ್. ಚಂದ್ರಶೇಖರ್ ತಿಳಿಸಿದರು.
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎವಿಕೆ ಪಿಯು ಕಾಲೇಜು ಸಭಾಂಗಣದಲ್ಲಿ ಕದಂಬ ಚೆಸ್ ಅಕಾಡೆಮಿ ಹಾಗೂ ಶಿಕ್ಷಣ ಸಂಸ್ಥೆ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಚೆಸ್ ಆಟ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಎಂಬುದು ಮಕ್ಕಳಲ್ಲಿ ಬಲವಾದ ನಂಬಿಕೆ, ದೃಢ ಚಿತ್ತತೆಯನ್ನು ಮೂಡಿಸುತ್ತದೆ. ರಾಮಾಯಣ ಮತ್ತು ಮಹಾಭಾರತದ ಮೂಲಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದೆ ರೀತಿ ಚೆಸ್ ಎಂಬುದು ಕೂಡ ಜೀವನದ ಭರವಸೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಮಕ್ಕಳಲ್ಲಿ ವೈಜ್ಞಾನಿಕ ಆಲೋಚನೆಯನ್ನು ಬೆಳೆಸಲು ಅನುಕೂಲವಾಗಲಿದೆ ಎಂದರು.
ಚದುರಂಗ ಆಟ ಮಕ್ಕಳು ಒಳ್ಳೆಯ ಆಲೋಚನೆಗಳನ್ನು ಮಾಡಲು ಸಹಕಾರಿಯಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಚೆಸ್ ಆಟ ಆಡುವುದರಿಂದ ಅವರ ಚಿಂತನೆಯ ಮಟ್ಟ ವಿಸ್ತಾರಗೊಳ್ಳಲಿದೆ. ಈ ಆಟವು ಮುಂದಿನ ಜೀವನಕ್ಕೆ ಸ್ಫೂರ್ತಿಯಾಗಲಿದೆ. ಕ್ರಿಕೆಟ್ ಆಟಕ್ಕೆ ಪ್ರಾಮುಖ್ಯತೆ ಕೊಟ್ಟಂತೆ ಚೆಸ್ ಆಟಕ್ಕೂ ಮಕ್ಕಳು ಆದ್ಯತೆ ನೀಡಲು ಪೋಷಕರು ಪ್ರೋತ್ಸಾಹಿಸಬೇಕು. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ಬೀಗದೇ, ಸೋತಾಗ ಕುಗ್ಗದೆ ಮುಂದೆ ಸಾಗಬೇಕು ಎಂದು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಉದಾಹರಣೆಯಾಗಿ ತಿಳಿಸಿದರು.
ಹಾಸನ ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷರಾದ ರಶ್ಮಿ ಕಿರಣ್ ಮಾತನಾಡಿ, ಟಿವಿ, ಮೊಬೈಲ್ ನೋಡಬೇಡ ಎಂದು ಮಕ್ಕಳಿಗೆ ಪೋಷಕರು ಹೇಳುವುದುಂಟು. ಮೊಬೈಲ್ ಬಳಕೆ ಅವಶ್ಯಕತೆ ಇದ್ದಾಗ ಉಪಯೋಗಿಸಿ. ಮೊಬೈಲ್‌ಅನ್ನು ಹೆಚ್ಚು ಉಪಯೋಗಿಸಿದ್ದಷ್ಟು ಅಪಾಯ ಕೂಡ ಅಷ್ಟೇ ಇರುತ್ತದೆ. ಮೊಬೈಲ್ ನೋಡುವ ಬದಲು ಚೆಸ್‌ನಂತಹ ಆಟೋಟಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿರುವುದರಿಂದ ಅವರ ಬುದ್ಧಿ ಚುರುಕುಗೊಳ್ಳುತ್ತದೆ. ಓದುವುದಕ್ಕೆ ಎಷ್ಟು ಮುಖ್ಯವೋ ಅದರಂತೆ ಆಟ ಆಡುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಯಾವುದೇ ಕ್ರೀಡೆ ಆಗಿರಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಎಲ್ಲ ಚೆಸ್ ಆಟಗಾರರಿಗೆ ಶುಭಾಶಯಗಳು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ಎಂ.ಟಿ. ತ್ಯಾಗರಾಜ್, ಹಾಸನ ಜಿಲ್ಲಾ ಚೆಸ್ ಅಸೋಸಿಯೇಶನ್ ಖಜಾಂಚಿ ವಿ.ಜಿ.ಎಂ. ಪ್ರತಾಪ್, ಜಿಲ್ಲಾ ಚೆಸ್ ಅಸೋಸಿಯೇಶನ್ ಸಹ ಕಾರ್ಯದರ್ಶಿ ರಾಧಾ ಆರ್. ಜಗದೀಶ್, ಉಪಾಧ್ಯಕ್ಷ ಎಂ.ಎನ್. ಹರೀಶ್ ಕುಮಾರ್, ಕದಂಬ ಚೆಸ್ ಅಕಾಡೆಮಿ ಟ್ರೈನರ್ ಕಾವ್ಯಾ ಚಂದನ್, ನವೀನ್ ಕುಮಾರ್, ಎವಿಕೆ ಕಾಲೇಜಿನ ಸುನೀಲ್ ಕುಮಾರ್ ಇತರರು ಪಾಲ್ಗೊಂಡಿದ್ದರು.