ಜಿಲ್ಲೆ

ಮಕ್ಕಳ ಆರೈಕೆ ಬಗ್ಗೆ ನಿಗಾವಹಿಸಿ:ದುಂಡಪ್ಪ ತುರಾದಿ

ಕೊಪ್ಪಳ: ಗ್ರಾಪಂವಾರು ಮಕ್ಕಳ ಆರೈಕೆ ಕೇಂದ್ರ ಶೀಘ್ರ ಆರಂಭವಾಗಲಿದ್ದು, ತರಬೇತಿ ಪಡೆದು ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವಂತೆ ತಾಪಂ ಇಒ ದುಂಡಪ್ಪ ತುರಾದಿ ಸಲಹೆ ನೀಡಿದರು.


ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಕ್ಕಳ ಆರೈಕೆದಾರರಿಗೆ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಆ.15ರಂದು ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮಕ್ಕಳ ಇಲಾಖೆಯಿಂದ ಗ್ರಾಪಂಗೆ ಒಂದರಂತೆ ಶಿಶು ಪಾಲನಾ ಕೇಂದ್ರ ಆರಂಭವಾಗಲಿವೆ. ದಾಖಲಾಗುವ ಮಕ್ಕಳನ್ನು ನೋಡಿಕೊಳ್ಳಲು ಆರೈಕೆದಾರರ ಅಗತ್ಯವಿದೆ. ಆರೈಕೆದಾರರಿಗೆ ಉದ್ಯೋಗ ಚೀಟಿ ಮೂಲಕ ಗೌರವಧ ಪಾವತಿಸಲಾಗುವುದು. ನಾಲ್ಕು ದಿನ ತರಬೇತಿ ಇದ್ದು, ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಸಂಶಯಗಳಿದ್ದಲ್ಲಿ ಪ್ರಶ್ನೆ ಕೇಳಿ ಪರಿಹರಿಸಿಕೊಳ್ಳಿ. ಕೇಂದ್ರದ ಮಾಹಿತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಕೇಂದ್ರಗಳನ್ನು ಮಾದರಿ ಮಾಡುವಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾಗಿದೆ ಎಂದರು.


ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಮಾತನಾಡಿ, ಮಕ್ಕಳು ಶಿಶುಪಾಲನಾ ಕೇಂದ್ರಕ್ಕೆ ಬರುವುದರಿಂದ ಇದು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಜವಾಬ್ದಾರಿ. ಹೆಚ್ಚು ಗಮನಹರಿಸಿ ಮಕ್ಕಳ ಕಾಳಜಿ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ತೋರುವಂತಿಲ್ಲ ಎಂದು ಸಲಹೆ ನೀಡಿದರು.
ತಾಪಂ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತರಬೇತುದಾರರಾದ ಜಯಶ್ರೀ, ಭುವನೇಶ್ವರಿ, ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಿಬ್ಬಂದಿ ಗಂಗಾಧರ ಹಾಗೂ 37 ಗ್ರಾಪಂಗಳ ಆರೈಕೆದಾರರಿದ್ದರು.