ಜಿಲ್ಲೆ

ಮಕ್ಕಳ ಅಭ್ಯುದಯದಲ್ಲಿ ಪಾಲಕರ ಪಾತ್ರ ಬಹು ದೊಡ್ಡದು

ರಾಜಣ್ಣ

ನಾಪೋಕ್ಲು: ಕ್ರೀಡೆ, ವಿದ್ಯಾಭ್ಯಾಸ ಸೇರಿದಂತೆ ಮಕ್ಕಳ ಅಭ್ಯುದಯದಲ್ಲಿ ಪಾಲಕರ ಪಾತ್ರ ಬಹು ದೊಡ್ಡದು ಎಂದು ಲಯನ್ಸ್ ಕ್ಲಬ್ ನಾಪೋಕ್ಲು ವಲಯಾಧ್ಯಕ್ಷ ಮುಕ್ಕಾಟಿರ ವಿನಯ್ ಹೇಳಿದರು.

ಅವರು ಸಮೀಪದ ಪೇರೂರು ಗ್ರಾಮದ ಕೈಲ್ ಪೊಳ್ದ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪೇರೂರು ಸರ್ಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಭಾನುವಾರ ನಡೆದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪೇರೂರು ಗ್ರಾಮ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಇಲ್ಲಿ ಜೀವಂತವಾಗಿರುವ ಪದ್ಧತಿ, ಪರಂಪರೆ ಇತರ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು.

ಮಾಜಿ ಸೈನಿಕ ತಾಪಂಡ ನಾಗೇಶ್ ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಮಾಜಿ ಮಂಡಲ ಪ್ರಧಾನರಾದ ಮೂವೇರ .ಸಿ.ನಾಣಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಮೇಕುಮಣಿಯಂಡ ಡಾಟಿ ಪೂವಯ್ಯ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬೊಟ್ಟೋಳಂಡ ರವಿ ಕರುಂಬಯ್ಯ ಉಪಸ್ಥಿತರಿದ್ದರು.

ಗ್ರಾಮಸ್ಥರಿಗೆ ಹಗ್ಗಜಗ್ಗಾಟ, ವಾಲಗತ್ತಾಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮದುವೆಯಾದ ನೂತನ ದಂಪತಿಗಳನ್ನು ಸನ್ಮಾನಿಸಿ ಪರಿಚಯಿಸಲಾಯಿತು.

ಐವತ್ತು ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಊರಿನವರನ್ನು ಸನ್ಮಾನಿಸಲಾಯಿತು.
ಕ್ರೀಡೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ, ಮೇಕುಮಣಿಯಂಡ ತಮ್ಮಯ, ತೋಲಂಡ ಅರುಣ ಕಾವೇರಪ್ಪ, ಪಾಲೇಯಡ ಸಂತೋಷ್, ಮಚ್ಚುರ ಯದುಕುಮಾರ್, ಅಪ್ಪಚ್ಚೀರ ನಂದಕುಮಾರ್, ಮಚ್ಚುರ ಶರಿ ಬೋಪಣ್ಣ, ಅಪ್ಪಚ್ಚೀರ ಸಜನ್ ಬೋಪಯ್ಯ , ಕ್ಲಬ್‌ನ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.