ಜಿಲ್ಲೆ

ಮಂದೇವಾಲದಲ್ಲಿ ಚುನಾವಣಾಧಿಕಾರಿ ದಿಗ್ಬಂಧನ!

ಜೇವರ್ಗಿ: ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಆಗಮಿಸಿದ ಚುನಾವಣಾಧಿಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಕೋಣೆಯಲ್ಲಿ ದಿಗ್ಬಂಧನ ಹಾಕಿದ ಪ್ರಸಂಗ ಶುಕ್ರವಾರ ಮಂದೇವಾಲದಲ್ಲಿ ನಡೆದಿದೆ.

ಮಂದೇವಾಲ ಗ್ರಾಪಂಗೆ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ೧೮ ಸದಸ್ಯರಲ್ಲಿ ೯ ಕಾಂಗ್ರೆಸ್ ಮತ್ತು ೮ ಜೆಡಿಎಸ್ ಬೆಂಬಲಿತರಿದ್ದಾರೆ. ಅಧ್ಯಕ್ಷ ಹುದ್ದೆಗೆ ರಮೇಶ ಪಾಟೀಲ್, ಸಿದ್ದಮ್ಮ ಸಿದ್ದಗೊಂಡ ಹಾಗೂ ಉಪಾಧ್ಯಕ್ಷ ಹುದ್ದೆಗೆ ಸುಪ್ರಿತಾ ಚವ್ಹಾಣ್, ಲಕ್ಷ್ಮೀ ಪಂಡಿತ ಸ್ಪರ್ಧಿಸಿದ್ದರು. ರಮೇಶ ಪಾಟೀಲ್ ೯ ವೋಟ್ ಪಡೆದು ಗೆಲುವು ಸಾಧಿಸಿದರು. ಆದರೆ ಉಪಾಧ್ಯಕ್ಷರಾಗಿ ಜೆಡಿಎಸ್‌ನ ಲಕ್ಷ್ಮೀ ಪಂಡಿತ್ ಆಯ್ಕೆಯಾಗಿದ್ದಾರೆ.

ಇದಕ್ಕೆ ಕ್ಯಾತೆ ತೆಗೆದ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಬೆಂಬಲಿತರಲ್ಲಿ ಒಬ್ಬರು ಅನಕ್ಷರಸ್ಥ ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಸರಿಯಾಗಿ ವೋಟ್ ಮಾಡಿದ್ದಾರೆ. ಆದರೆ ಉಪಾಧ್ಯಕ್ಷ ಹುದ್ದೆಗೆ ಮತ ಹಾಕುವಾಗ ಬೇರೆಯವರಿಗೆ ಹೋಗಿದೆ. ಈ ಬಗ್ಗೆ ಚುನಾವಣಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರೂ ನಿರ್ಲಕ್ಷ್ಯ ವಹಿಸಿದ್ದಾರೆ. ಎಲೆಕ್ಷನ್ ಆಫಿಸರ್ ತಪ್ಪಿನಿಂದಾಗಿ ನಮ್ಮ ಪಾರ್ಟಿ ಬೆಂಬಲಿತರಿಗೆ ಸೋಲಾಗಿದೆ ಎಂದು ದೂರಿದರು.
ಚುನಾವಣಾಧಿಕಾರಿಯಾದ ಬಿಇಒ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿರುವ ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್., ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ಪರಶುರಾಮ, ನೆಲೋಗಿ ಪಿಎಸ್‌ಐ ಅಶೋಕ ಪಾಟೀಲ್, ಎಎಸ್‌ಐ ಗುರುಬಸ್ಸು ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿದ ಬಳಿಕ ಅಧಿಕಾರಿಯನ್ನು ಬಿಡುಗಡೆಗೊಳಿಸಲಾಯಿತು.

ಮಂದೇವಾಲ ಗ್ರಾಪಂನಲ್ಲಿ ಚುನಾವಣಾಧಿಕಾರಿ ತಪ್ಪಿನಿಂದಾಗಿ ಉಪಾಧ್ಯಕ್ಷ ಹುದ್ದೆಗೆ ಬೇರೊಬ್ಬರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ಒಬ್ಬರು ಅನಕ್ಷರಸ್ಥರಾಗಿದ್ದು, ಅವರ ಮತ ಚಲಾಯಿಸುವಂತೆ ಚುನಾವಣಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ ನಿರ್ಲಕ್ಷಿಸಿದ್ದರಿಂದ ಉಪಾಧ್ಯಕ್ಷ ಹುದ್ದೆ ಜೆಡಿಎಸ್ ಪಾಲಾಗಿದೆ. ಈ ಕುರಿತು ಎಲೆಕ್ಷನ್ ಆಫಿಸರ್ ವಿರುದ್ಧ ಕೋರ್ಟ್ ಮೆಟ್ಟಿಲೇರಲಾಗುವುದು.
| ಬಹಾದ್ದೂರ್ ರಾಠೋಡ್
ಕಾಂಗ್ರೆಸ್ ಮುಖಂಡ