ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರ ಮೂಲಕ ದಾಖಲೆ ನಿರ್ಮಿಸಲಾಗಿದೆ. ಪ್ರತಿ ಊರಲ್ಲಿ ಮಂದಿರ ನಿರ್ಮಾಣಕ್ಕೆ ಹಣ ಒದಗಿಸಲಾಗಿದ್ದು, ಕೆಲವೆಡೆ ಒಂದಕ್ಕಿಂತ ಹೆಚ್ಚು ದೇವಸ್ಥಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸೋಮನಟ್ಟಿ ಗ್ರಾಮದ ರೇಣುಕಾ(ಯಲ್ಲಮ್ಮ) ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ಮೊದಲನೇ ಕಂತಿನಲ್ಲಿ 10 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಯಲ್ಲಿ ಪ್ರಗತಿಯಾದಂತೆ ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು ಎಂದರು.
ಬಾಳೇಕುಂದ್ರಿ ಕೆ.ಎಚ್.ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನ ಕಟ್ಟಡ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನೂ ಬೇಗ ಬಿಡುಗಡೆ ಮಾಡುವುದಕ್ಕೆ ಶ್ರಮಿಸಲಾಗುವುದು ಎಂದರು.
ತುಮ್ಮರಗುದ್ದಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಶಂಕರಗೌಡ ಪಾಟೀಲ, ಶೇಖರ ಹೊಸೂರಿ, ಬಿ.ಎಂ.ಬಡಿಗೇರ, ಶಿವಾನಂದ, ಯಲ್ಲಪ್ಪ ನಿಟ್ಟೂರ, ಮಲ್ಲಪ್ಪ ಪೂಜೇರಿ, ಬಾಳಪ್ಪ ಮಾಸ್ತಮರ್ಡಿ, ರಾಮಪ್ಪ ನಿಟ್ಟೂರ, ಹೊಳೆಪ್ಪ ನಂದ್ಯಾಗೋಳ, ಕಲ್ಲಪ್ಪ ಮಾಸ್ತಮರ್ಡಿ ಇತರರಿದ್ದರು.
ಶಾಲಾ ಕೊಠಡಿಗೆ ಭೂಮಿಪೂಜೆ: ಗ್ರಾಮೀಣ ಪ್ರದೇಶದಲ್ಲಿ ಶಾಸಕಿಯಾದ ನಂತರ ಶೈಕ್ಷಣಿಕ ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವುದೇ ನನ್ನ ಧ್ಯೇಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತಾಲೂಕಿನ ಕರಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30.16 ಲಕ್ಷ ರೂ. ವೆಚ್ಚದ 2 ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.