ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ನಗರದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ ನಡೆದವು.
ಕಲಾವಿದರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಕಲಾವಿದರ ಒಕ್ಕೂಟದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಘ-ಸಂಸ್ಥೆಗಳಿಗೆ ಧನಸಹಾಯ ಹಾಗೂ ಅಸಂಘಟಿತ ಕಲಾವಿದರಿಗೆ ವೇಷಭೂಷಣ, ವಾದ್ಯ ಪರಿಕರಕ್ಕೆ ಸಹಾಯಧನ ಮಂಜೂರು ಮಾಡಲು 1 ಕೋಟಿ ರೂ.ನಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕ್ರಿಯಾ ಯೋಜನೆಯಲ್ಲಿ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಕಲಾವಿದರು ಅಸಹಜ ಮರಣ ಹೊಂದಿದರೆ ಅವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಬೇಕು. ಜನಪದವನ್ನು ಉಳಿಸಿ, ಬೆಳೆಸಲು ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಜನಪದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಸಿದ ಕಲಾವಿದರಿಗೆ 10 ದಿನದೊಳಗೆ ಸಂಭಾವನೆಯನ್ನು ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಸಾಹಿತಿ, ಕಲಾವಿದರಿಗೆ ಮಾಶಾಸನ ನೀಡಲು ಇರುವ ವಯಸ್ಸನ್ನು 58 ವರ್ಷದಿಂದ 50 ವರ್ಷಕ್ಕೆ ಇಳಿಕೆ ಮಾಡಬೇಕು ಹಾಗೂ ಹಾಲಿ ನೀಡುತ್ತಿರುವ ಮಾಶಾಸನವನ್ನು 2 ಸಾವಿರ ರೂ.ನಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಕಲಾವಿದರನ್ನು ಮಾಸಾಶನಕ್ಕೆ ಪರಿಗಣಿಸಬೇಕು. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಿಗೆ ರಾಜ್ಯಾದ್ಯಂತ ಕಲಾಸೇವೆ ಮಾಡಲು ಉಚಿತವಾಗಿ ಸರ್ಕಾರಿ ಬಸ್‌ಪಾಸ್ ನೀಡಬೇಕು. ಪ್ರತಿ ಭಾನುವಾರ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಉದಯರಾಗ ಮತ್ತು ಸಂಧ್ಯಾರಾಗ ಕಾರ್ಯಕ್ರಮಗಳನ್ನು ಮರು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ರಾ.ವೀರೇಶ್ ಪ್ರಸಾದ್, ಕಲಾವಿದರಾದ ಕೀಲಾರ ಕೃಷ್ಣೇಗೌಡ, ಕಾರಸವಾಡಿ ಮಹದೇವು, ಹನಿಯಂಬಾಡಿ ಶೇಖರ್, ದೇವರಾಜ ಕೊಪ್ಪ, ಎಂ.ವಿ.ಶಿವಣ್ಣ, ಜಗದೀಶ್, ಮಂಜುಳಾ, ಉಮಾಪತಿ, ಗೊರವಾಲೆ ಚಂದ್ರಶೇಖರ್, ಸಂತೆಕಸಲಗೆರೆ ಬಸವರಾಜು ಇತರರಿದ್ದರು.
ಬೀದಿ ಕಾರ್ಮಿಕರ ಪ್ರತಿಭಟನೆ: ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರವು ಬೀಡಿ ಕಾರ್ಮಿಕರು ಹಾಗೂ ಉದ್ಯಮದ ಸಮಸ್ಯೆಗಳನ್ನು ಪರಿಹರಿಸಬೇಕು. ಕಾನೂನುಬಾಹಿರವಾಗಿ ನಡೆಯುತ್ತಿರುವ ಬೀಡಿ ಉತ್ಪಾದನೆ ಮೇಲೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ರಾಷ್ಟ್ರೀಯ ಸಮಾನ ಕನಿಷ್ಠ ಕೂಲಿಯಾಗಿ ಒಂದು ಸಾವಿರ ಬೀಡಿ ಸುತ್ತಲು 375 ರೂ. ನೀಡಬೇಕು. ಬೆಲೆ ಏರಿಕೆ ಸೂಚ್ಯಂಕದ 7,479 ನಂತರದಲ್ಲಿ ಹೆಚ್ಚಾಗುವ ಪ್ರತಿ ಅಂಕ ಒಂದಕ್ಕೆ 5 ಪೈಸೆಯಂತೆ ತುಟ್ಟಿ ಭತ್ಯೆ ಕೊಡಬೇಕು. ಬೀಡಿ ಉದ್ಯಮದಲ್ಲಿನ ಇತರ ಕಾರ್ಮಿಕರಿಗೆ ಮಾಸಿಕ 21 ಸಾವಿರ ರೂ. ಕನಿಷ್ಠ ಕೂಲಿ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ /ಉಪ ಗುತ್ತಿಗೆ ಪದ್ಧತಿಯನ್ನು ನಿಲ್ಲಿಸಬೇಕು. ಬೀದಿ ಮಾಲೀಕರನ್ನು ಭಾದ್ಯಸ್ಥರಾಗಿ ಮಾಡಬೇಕು. ಸರ್ಕಾರ ಮತ್ತು ಮಾಲೀಕರು ಅಪಾಯಕಾರಿ ಸ್ಥಿತಿಯಲ್ಲಿರುವ ಕಾರ್ಮಿಕರ ಜವಾಬ್ದಾರಿ ವಹಿಸಿಕೊಳ್ಳಬೇಕು. ಗುರುತಿನ ಚೀಟಿ ನೀಡಬೇಕು. ಇದರ ಆಧಾರ ಮೇಲೆ ಎಲ್ಲ ಸೌಲಭ್ಯ ನೀಡಬೇಕು. ವಂತಿಕೆ ಹಣವನ್ನು ಕೇಂದ್ರ ಸರ್ಕಾರವೇ ಭರಿಸಬೇಕು. ಕಾರ್ಮಿಕರ ಪಿಫ್ ಪಿಂಚಣಿಯನ್ನು ಕನಿಷ್ಠ ಮಾಸಿಕ 7 ಸಾವಿರ ರೂ.ಗಳಿಗೆ ನಿಗದಿ ಮಾಡಬೇಕು. ಮಳೆಯಿಂದ ಹಾನಿಗೊಳಗಾದ ಬೀಡಿ ಕಾರ್ಮಿಕ ಕಾಲನಿಯ ನಿವಾಸಿಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಮನೆ, ನಿವೇಶನ ನೀಡುವ ಮೂಲಕ ಸೌಲಭ್ಯ ವಂಚಿತ ಕಾರ್ಮಿಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಕುಮಾರಿ, ಅಬ್ದುಲ್, ಸಹಿದಾ ಬಾನು, ಸಮೀನಾ ತಾಜ್, ಹಸೀನಾ, ನಾಗರಾಜು, ಶಶಿಕಲಾ ಭಾಗವಹಿಸಿದ್ದರು.