ಜಿಲ್ಲೆ

ಮಂಡ್ಯ ವಿವಿ ಪ್ರತ್ಯೇಕವಾಗಿಯೇ ಮುಂದುವರೆಸಲಿ: ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಒತ್ತಾಯ

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸದೇ ಪ್ರತ್ಯೇಕವಾಗಿಯೇ ಮುಂದುವರೆಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಭೆ ಕರೆದು ಜಿಲ್ಲೆಯ ಅಸ್ಮಿತೆಯನ್ನು ಉಳಿಸಬೇಕು ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಒತ್ತಾಯಿಸಿದರು.

ಕಳೆದ 6 ವರ್ಷದಲ್ಲಿ ಮಂಡ್ಯ ವಿವಿ ಪ್ರಗತಿಯತ್ತ ಸಾಗುತ್ತಿದೆ. ಆದರೆ ಅದನ್ನು ಮುಚ್ಚುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಸಚಿವರು, ಶಾಸಕರಗಳು, ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಸರ್ಕಾರದ ಅನುದಾನ ಬಳಕೆಯಾಗುತ್ತಿದೆ. ಆದರೆ 9 ವಿವಿಗೆ ಅನುದಾನ ಕೊರತೆ ಎಂದು ಮುಚ್ಚುವ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದರೂ ಮುಚ್ಚುವ ಪ್ರಶ್ನೆ ಏಕೆ?. ಈ ವಿಚಾರವಾಗಿ ಜಿಲ್ಲೆಯ ಜನಪ್ರತಿನಿಧಿಗಳ ಒಗ್ಗಟ್ಟಿನಲ್ಲಿ ಬಿರುಕು ಇರದಿರಲಿ. ಮಂಡ್ಯ ಹಾಗೂ ಮಹಾರಾಣಿ ವಿಶ್ವವಿದ್ಯಾಲಯಗಳ ಸಂಬಂಧ ಸಲಹಾ ಸಮಿತಿ ಎರಡು ವರದಿಯನ್ನು ಸರ್ಕಾರಕ್ಕೆ ನೀಡಿದೆ. ಹಳ್ಳಿಗಾಡಿನ ಹೊಸ ವಿದ್ಯಾರ್ಥಿಗಳ ರೂಪುರೇಷೆಗಳ ಬಗ್ಗೆ ಸವಿವರ ಮಾಹಿತಿ ನೀಡಿದ್ದು, ಇದನ್ನು ಪರಿಗಣಿಸಿ ಸರ್ಕಾರ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನ ಮಾಡುವ ನಿರ್ಣಯ ಕೈಬಿಡಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಮಹಂತಪ್ಪ, ರಾಜ್ಯ ಸಂಚಾಲಕಿ ದೇವಮ್ಮ, ಕಮ್ಮನಾಯಕನಹಳ್ಳಿ ಮಂಜು, ಎಂ.ಸತೀಶ, ಶಿವಾನಿ ಇದ್ದರು.