ಜಿಲ್ಲೆ

ಮಂಟೇಸ್ವಾಮಿ ಮಠದಲ್ಲಿ ಹುಂಡಿ ಕಳ್ಳತನ

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದಲ್ಲಿ ಗುರುವಾರ ರಾತ್ರಿ ಗದ್ದಿಗೆ ಮುಂದೆ ಇರಿಸಿದ್ದ ಹುಂಡಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ.


ಗ್ರಾಮದ ಹೃದಯ ಭಾಗದಲ್ಲೇ ಇರುವ ಮಠದ ಮಂಟೇಸ್ವಾಮಿ ಗದ್ದಿಗೆ ಮುಂಭಾಗವೇ ಇರಿಸಿದ್ದ ಹುಂಡಿ ಕಳ್ಳತನವಾಗಿದೆ. ಹುಂಡಿಯನ್ನು ಶ್ರೀಮಠದ ಪೀಠಾಧ್ಯಕ್ಷರು ವಾಸಿಸುವ ಮನೆಯ ಒಳಭಾಗಕ್ಕೆ ಎತ್ತಿಡಲಾಗಿತ್ತು. ಮಠದ ಕಟ್ಟಡವು ಹಳೆಯ ಶೈಲಿಯ ತೊಟ್ಟಿಮನೆಯಾಗಿದ್ದು, ಕಳ್ಳರು ತೊಟ್ಟಿಗೆ ಅಳವಡಿಸಿದ್ದ ಮೆಸ್ ಕತ್ತರಿಸಿ ಒಳಗೆ ಇಳಿದು ಮುಂಬಾಗಿಲನ್ನು ತೆರೆದು ಹುಂಡಿಯನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಸ್ಥಳಕ್ಕೆ ಬೆಳಕವಾಡಿ ಪೊಲೀಸ್ ಠಾಣೆ ಪಿಎಸ್‌ಐ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಮಾಹಿತಿ ಸಂಗ್ರಹಿಸಲಾಯಿತು. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅನುಮಾನ: ಮನೆಯ ಛಾವಣಿಯಿಂದ ಕೆಳ ಭಾಗಕ್ಕೆ ಕನಿಷ್ಠ 12 ರಿಂದ 15 ಅಡಿಯಷ್ಟು ಎತ್ತರ ಇರುವುದರಿಂದ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಮಠದ ಹುಂಡಿ ವಿಚಾರವಾಗಿ ಹಲವು ದಿನಗಳಿಂದ ಪೀಠಾಧಿಕಾರಿ ಕುಟುಂಬದ ನಡುವೆ ದಾಯಾದಿ ಕಿತ್ತಾಟ ನಡೆಯುತ್ತಿರುವುದು ಸಾರ್ವಜನಿಕವಾಗಿ ಬಹಿರಂಗ ವಿಚಾರವಾಗಿದ್ದು, ಮಠದ ಆವರಣ ಸೇರಿದಂತೆ ಸುತ್ತಲಿನ ಹಲವೆಡೆ ಸಿಸಿ ಟಿವಿ ಕಣ್ಗಾವಲಿನಲ್ಲಿದೆ. ಆದರೆ ಹುಂಡಿ ಕಳ್ಳತನಕ್ಕೆ ಬಂದಿದ್ದ ಕಳ್ಳರು ಸಿಸಿ ಟಿವಿ ವಿಡಿಯೋ ಸಂಗ್ರಹಣೆಯ ಡಿವಿಆರ್‌ಗೆ ಪೂರೈಕೆಯಾಗುವ ವಿದ್ಯುತ್ ಸ್ವಿಚ್ ಆಫ್ ಮತ್ತು ಮತ್ತೊಂದು ಡಿವಿಆರ್‌ನ ಕೇಬಲ್ ಸಹ ಕಡಿತಗೊಳಿಸಿದ್ದಾರೆ.

ಇತ್ತೀಚೆಗೆ ನಡೆದ ಅಮಾವಾಸ್ಯೆ ಪೂಜೆಗೆ ಶ್ರೀಮಠಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದರಿಂದ ಹುಂಡಿಯಲ್ಲಿ ಲಕ್ಷ ರೂ.ಗೂ ಅಧಿಕ ಹಣ ಶೇಖರಣೆಯಾಗಿತ್ತು ಎನ್ನಲಾಗಿದೆ. ಆದರೆ, ಪೊಲೀಸ್ ಹೇಳಿಕೆಯಲ್ಲಿ ಕೇವಲ 20 ರಿಂದ 25 ಸಾವಿರ ರೂ. ಇದ್ದಿರಬಹುದು ಎಂದು ಮಠದವರು ತಿಳಿಸಿದ್ದಾರೆ.

ಶ್ರೀಮಠಕ್ಕೆ ಅಪಾರ ಭಕ್ತಗಣ: ಪವಾಡ ಪುರುಷ ಮಂಟೇಸ್ವಾಮಿ ಐಕ್ಯಸ್ಥಳವಾಗಿರುವ ಶ್ರೀಮಠಕ್ಕೆ ಅಪಾರ ಭಕ್ತಗಣವಿದ್ದು, ತಮ್ಮ ಸಂಕಷ್ಟಗಳ ನಿವಾರಣೆಗಾಗಿ ಪ್ರತಿದಿನ ಮಹಿಳೆ ಮತ್ತು ಪುರುಷರು ಸೇರಿದಂತೆ ಹಲವಾರು ಭಕ್ತರು ಮಠದ ಆವರಣದಲ್ಲಿ ಬಂದು ವಾಸ್ತವ್ಯ ಹೂಡಿ ಪೂಜೆ ಸಲ್ಲಿಸಿ ತೆರಳುವುದು ವಾಡಿಕೆ. ಅದೇ ರೀತಿ ರಾತ್ರಿಯೂ ಕೆಲವು ಭಕ್ತರು ತಂಗಿದ್ದರು ಎನ್ನಲಾಗಿದೆ.

ಇಲ್ಲಿಯ ಸ್ಥಳೀಯರು ಹೇಳುವ ಪ್ರಕಾರ ಮಠದ ಇತಿಹಾಸದಲ್ಲಿ ಕಳ್ಳತನ ಪ್ರಕರಣಗಳು ನಡೆದಿರುವುದು ವಿರಳ. ಹೊರಗಿನವರಿಗಿಂತ ಒಳಗಿನವರ ಕೈವಾಡದಿಂದಲೇ ಕಳ್ಳತನ ನಡೆದಿರಬಹುದೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೊಲೀಸರ ತನಿಖೆೆಯಿಂದಷ್ಟೇ ಭಕ್ತರಲ್ಲಿರುವ ಹಲವು ಅನುಮಾನಗಳಿಗೆ ಉತ್ತರ ಸಿಗಬೇಕಿದೆ.