ಮೈಸೂರು: ಗ್ರಾಮೀಣ ಜನರು ಮಂಟೇಸ್ವಾಮಿ ಪರಂಪರೆಯನ್ನು ಇಂದಿಗೂ ಮೈಗೂಡಿಸಿಕೊಂಡು ಬಂದಿದ್ದಾರೆ ಎಂದು ಶ್ರೀ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಆಶ್ರಯ ಪ್ರಗತಿ ಸಂಘಗಳ ಒಕ್ಕೂಟ, ನಯನ ಪ್ರದೇಶ ಮಟ್ಟದ ಸಂಘದ ವತಿಯಿಂದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಂಟೇಸ್ವಾಮಿ ಕಾವ್ಯದ ತಾತ್ವಿಕತೆ ವಿಚಾರೋಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಂಟೇಸ್ವಾಮಿ ಸಮಾಜದ ಪರಿವರ್ತನೆಗೆ ಶ್ರಮಿಸಿದ್ದರು ಎಂದರು.
ಚಾಮರಾಜನಗರ ಹರವೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಮಹೇಶ್ ಹರವೆ ಮಾತನಾಡಿ, ಹಲವು ಕಾರಣಗಳಿಂದ ಶ್ರಮಿಕ ವರ್ಗ ವಿಭಜನೆಯಾದಾಗ ಅವರನ್ನು ಒಗ್ಗೂಡಿಸುವ ಕಾರ್ಯವನ್ನು ಮಂಟೇಸ್ವಾಮಿ ಮಾಡಿದ್ದರು. ಕನ್ನಡ ನಾಡಿನ ಕುಶಲಕರ್ಮಿಗಳನ್ನು ಒಂದುಗೂಡಿಸುವ ಕೆಲಸ ಆಯಾಯ ಕಾಲದಲ್ಲಿ ನಡೆಯಲು ಮಂಟೇಸ್ವಾಮಿ ಅವರೇ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಚಿತ್ರ ನಿರ್ಮಾಪಕ ಬಿ. ಕುಮಾರಸ್ವಾಮಿ, ಚಾಮರಾಜನಗರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ, ವಕೀಲ ಹರೀಶ್ ಗೌಡ, ದೊಡ್ಡೇಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ.ಡಿ. ಮಹದೇವಸ್ವಾಮಿ ವಜ್ರಿ, ಕವಿ ನಾಗರಾಜ್ ತಲಕಾಡು, ಆಶ್ರಯ ಪ್ರಗತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ ಹಾಗೂ ಇತರರು ಇದ್ದರು.