ಕೋಲಾರ: ಮಾಲೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಪಕ್ಷ ನಿಷ್ಠರು ಮತ್ತು ಸ್ಥಳಿಯರನ್ನು ಕಡೆಗಣಿಸಿ ಮಾಜಿ ಶಾಸಕ ಮಂಜುನಾಥಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅಭ್ಯರ್ಥಿಯನ್ನಾಗಿಸಲು ಸಂಸದ ಎಸ್.ಮುನಿಸ್ವಾಮಿ, ಉಸ್ತುವಾರಿ ಸಚಿವ ಮುನಿರತ್ನ ಯತ್ನಿಸುತ್ತಿರುವುದು ಸರಿಯಲ್ಲ ಎಂದು ಆ ಕ್ಷೇತ್ರದ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪಂಚಾಯತ್ರಾಜ್ ಪ್ರಕೋಷ್ಠದ ತಾಲೂಕು ಅಧ್ಯಕ್ಷ ಪ್ರಭಾಕರ್, ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಸದರ ಗೆಲುವಿಗೆ ಹಲವರು ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ್ದರು. ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿದ್ದರು. ಆದರೆ ಇದನ್ನೆಲ್ಲ ಮರೆತು, ಮಾಜಿ ಶಾಸಕ ಮಂಜುನಾಥಗೌಡ ಅವರನ್ನು ವೇದಿಕೆಗಳಲ್ಲಿ ಕೂರಿಸಿಕೊಂಡು ಹಾಡಿ ಹೊಗಳುತ್ತಿರುವುದು ಪಕ್ಷ ಹಾಗೂ ಕಾರ್ಯಕರ್ತರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಎಸ್.ಮುನಿಸ್ವಾಮಿ ಹಾಗೂ ಮುನಿರತ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮಂಜುನಾಥಗೌಡರ ಶ್ರಮ ಏನೇನು ಇಲ್ಲ. ಸಂಸದರ ವ್ಯವಹಾರ, ವಿಶ್ವಾಸಕ್ಕೆ ಅನುಗುಣವಾಗಿ ಅವರನ್ನು ಅಭ್ಯರ್ಥಿಯನ್ನಾಗಿಸಿ, ಋಣ ತೀರಿಸುತ್ತೇವೆ ಎಂದು ಹೊರಟಿದ್ದಾರೆ. ಇದಕ್ಕೆ ಕಾಯಕರ್ತರು, ಮುಖಂಡರ ಬೆಂಬಲವಿಲ್ಲ. ಮಂಜುನಾಥಗೌಡ ಶಾಸಕರಾದ ನಂತರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರವನ್ನೇ ಮರೆತುಬಿಟ್ಟಿದ್ದರು. ಕರೊನಾ ಸಂಕಷ್ಟದಲ್ಲೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರ ತಂದೆ ಬಚ್ಚೇಗೌಡ, ಶರತ್ಬಚ್ಚೇಗೌಡರ ಜತೆಯಲ್ಲಿ ಇದ್ದಾರೆ. ಎಲ್ಲ ಪಕ್ಷಗಳೂ ದೂರವಿಟ್ಟಿರುವ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಅವಶ್ಯಕತೆಯಿಲ್ಲ. ಪಕ್ಷಕ್ಕೆ ತನ್ನದೇ ಆದ ಗೌರವ, ಇತಿಹಾಸವಿದೆ. ಅದನ್ನು ಹಾಳು ಮಾಡಬೇಡಿ ಎಂದು ಸಲಹೆ ನೀಡಿದರು.
ನಾನೂ ಸೇರಿದಂತೆ ಬಿಜೆಪಿ ತಾಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ, ಸಮಾಜ ಸೇವಕ ಹೂಡಿ ವಿಜಯ್ಕುಮಾರ್ ಮತ್ತಿತರರು ಆಕಾಂಕ್ಷಿಗಳಿದ್ದೇವೆ. ಹೂಡಿ ವಿಜಯ್ಕುಮಾರ್ ಮೂಲತ@ ಪುರ ಗ್ರಾಮದವರು. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದ್ದು, ಸ್ವಕ್ಷೇತ್ರದಲ್ಲಿ ಸೇವೆ ಮಾಡಲು ಹಿಂತಿರುಗಿದ್ದಾರೆ. ನಮ್ಮಲ್ಲಿ ಯಾರನ್ನಾದರೂ ಅಭ್ಯರ್ಥಿಯನ್ನಾಗಿಸಲಿ. ಹೈಕಮಾಂಡ್ಗೆ ಸಹ ಇದನ್ನೆ ತಿಳಿಸುತ್ತೇವೆ. ವೈಯಕ್ತಿಕ ಲಾಭಕ್ಕಾಗಿ ಅವರನ್ನು ಪಕ್ಷಕ್ಕೆ ಕರೆತಂದು ಅಭ್ಯರ್ಥಿ ಮಾಡಿ ನಮ್ಮನ್ನು ಬಲಿಪಶು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ದಿಶಾ ಸಮಿತಿ ಸದಸ್ಯ ನಾರಾಯಣಸ್ವಾಮಿ, ಹಾಲು ಪ್ರಕೋಷ್ಠದ ಅಧ್ಯಕ್ಷ ವೆಂಕಟೇಶ್ಗೌಡ, ಮುಖಂಡರಾದ ರಾಜಾರಾಂ, ಗುರುನಾಥರೆಡ್ಡಿ ಇದ್ದರು.
13ಕ್ಕೆ ಸಮಾವೇಶ: ಮಾಲೂರು ಹೊರವಲಯದಲ್ಲಿ ಮೇ 13ರಂದು 25-&30 ಸಾವಿರ ಜನರನ್ನು ಸೇರಿಸಿ ಬಿಜೆಪಿಯ ಎಲ್ಲ ಪ್ರಕೋಷ್ಠಗಳ ಬೃಹತ್ ಸಮಾವೇಶ ಮಾಡುತ್ತಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಎಸ್.ಮುನಿಸ್ವಾಮಿ, ಸಚಿವ ಮುನಿರತ್ನ ಸೇರಿ ಅನೇಕ ಸಚಿವರು, ಮುಖಂಡರು ಆಗಮಿಸಲಿದ್ದಾರೆ ಎಂದು ಬಿಜೆಪಿ ಮಾಲೂರು ತಾಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ ತಿಳಿಸಿದರು.
ಬಿಜೆಪಿ ಪಕ್ಷಕ್ಕೆ ಯಾರೇ ಬಂದರೂ ಸೇರಿಸಿಕೊಳ್ಳಿ ಎಂದು ಹೈಕಮಾಂಡ್ ತಿಳಿಸಿದೆ. ಆದರೆ, ಸ್ಥಳಿಯರನ್ನೇ ಅಭ್ಯರ್ಥಿಯನ್ನಾಗಿಸಬೇಕೆನ್ನುವುದು ನಮ್ಮ ಆಗ್ರಹವಾಗಿದ್ದು, ಬಿಜೆಪಿಯು ಕ್ಷೇತ್ರದಲ್ಲಿ ಸದೃಢವಾಗಿ ಬೆಳೆದಿದೆ. ಅದು ಬೆಳೆದಿರುವುದಕ್ಕೆ ಕಾರಣರಾದವರನ್ನು ಅಭ್ಯರ್ಥಿಯನ್ನಾಗಿಸಲಿ ಎಂದು ಒತ್ತಾಯಿಸಿದರು.
ಬೀದಿಗೆ ಬಂದ ಭಿನ್ನಾಭಿಪ್ರಾಯ: ಚುನಾವಣೆಗೆ ಇನ್ನೂ ವರ್ಷ ಬಾಕಿ ಇರುವಾಗಲೇ ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಮಾಲೂರಿನಲ್ಲಿ ಮಾಜಿ ಶಾಸಕರ ಪಕ್ಷ ಸೇರ್ಪಡೆ ವಿರುದ್ಧ ಕೆಲವು ಕಾರ್ಯಕರ್ತರು ತಿರುಗಿಬಿದ್ದಿರುವುದು ಸಾಕ್ಷಿಯಾಗಿದೆ. ಹೂಡಿ ವಿಜಯ್ ಕುಮಾರ್ ಪರ ಸ್ಥಳಿಯ ಮುಖಂಡರ ಬಣವೊಂದು ಇದ್ದರೆ, ಮಂಜುನಾಥಗೌಡರ ಪರ ಸಂಸದ ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ಆಸಕ್ತಿ ತೋರುತ್ತಿದ್ದಾರೆ. ಆಕಾಂಕ್ಷಿಗಳ ಪರ ಮತ್ತು ವಿರೋಧ ಅಭಿಪ್ರಾಯ ಇದೀಗ ಬೀದಿಗೆ ಬಂದಿರುವುದರಿಂದ ಯಾವ ಶಿಸ್ತು ಕ್ರಮ ಜರುಗಿಸುತ್ತಾರೋ ಕಾದುನೋಡಬೇಕಿದೆ.