ಜಿಲ್ಲೆ

ಮಂಗೇರಿರ ಮುತ್ತಣ್ಣ ವೃತ್ತಕ್ಕೆ ಕೊನೆಗೂ ಮುಕ್ತಿ

Kodagu

ಮಡಿಕೇರಿ: ಸವಾರರಿಗೆ ಕಂಟಕವಾಗಿ ಗುಂಡಿ ಬೀಳುತ್ತಿದ್ದ ’ಮಂಗೇರಿರ ಮುತ್ತಣ್ಣ’ ವೃತ್ತಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.

ಹೌದು.. ಈ ಹಿಂದೆ ನಗರದ ಮಂಗೇರಿರ ಮುತ್ತಣ್ಣ ವೃತ್ತ ಮತ್ತು ಇಂದಿರಾಗಾಂಧಿ ವೃತ್ತದಲ್ಲಿ ಸಣ್ಣ ಮಳೆಗೆ ಕಿತ್ತು ಬೃಹದಾಕಾರದ ಗುಂಡಿಗಳು ನಿರ್ಮಾಣವಾಗುತ್ತಿತ್ತು. ಬೈಕ್, ಆಟೋ ಚಾಲಕರಿಗೆ ಕಂಟಕವಾಗಿ ಕಾಡುತ್ತಿತ್ತು. ಆದರೆ ನಗರಸಭೆಯ ಮುತುವರ್ಜಿಯಿಂದ ಇಂದು ಕಾಂಕ್ರೀಟ್ ರಸ್ತೆ ಮಾಡಲಾದ ಪರಿಣಾಮ ಮುಕ್ತಿ ಸಿಕ್ಕಿದಂತಾಗಿದೆ.

ಒಟ್ಟು 80 ಲಕ್ಷ ರೂ.: ನಗರ ಸ್ಥಳೀಯ ಸಂಸ್ಥೆಗಳ ನಗರೋತ್ಥಾನ 3ನೇ ಹಂತದ ಕ್ರಿಯಾ ಯೋಜನೆಯಡಿಯಲ್ಲಿ ಇಂದಿರಾಗಾಂಧಿ ವೃತ್ತ ಮತ್ತು ಮಂಗೇರಿರ ಮುತ್ತಣ್ಣ ವೃತ್ತ ಅಭಿವೃದ್ಧಿ ಕಾಮಗಾರಿಗೆ ತಲಾ 40 ಲಕ್ಷ ರೂ. ಸೇರಿದಂತೆ ಒಟ್ಟು 80 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇಂದಿರಾಗಾಂಧಿ ವೃತ್ತ 4 ತಿಂಗಳ ಹಿಂದೆ ಸಂಚಾರಕ್ಕೆ ಲಭ್ಯವಾದರೆ, ಕರೊನಾ ಹಿನ್ನೆಲೆ ತಡವಾಗಿ ಆರಂಭವಾದ ಮಂಗೇರಿರ ಮುತ್ತಣ್ಣ ವೃತ್ತ ಸೋಮವಾರದಿಂದ ಲಭ್ಯವಾಗಿದೆ.

ಆಮೆ ಗತಿಯಲ್ಲಿ ಸಾಗಿದ್ದ ಕಾಮಗಾರಿ: 2020ರ ಜನವರಿ ತಿಂಗಳಿಂದ ಆರಂಭವಾದ ಕಾಮಗಾರಿ ವೃತ್ತದ ಒಂದು ಭಾಗ ಮಾತ್ರ ಪೂರ್ಣಗೊಳಿಸಲಾಗಿತ್ತು. ನಂತರ ಕರೊನಾ ಹಿನ್ನೆಲೆ ಇಲ್ಲದೆ 3-4 ಜನ ಕಾರ್ಮಿಕರು ಸೇರಿ ಮತ್ತೊಂದು ಭಾಗದ ಮಣ್ಣು ತೆರವು ಮಾಡಿ, ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿತ್ತು. ನಂತರ ಚುರುಕುಗೊಂಡ ಕಾಂಕ್ರೀಟ್ ಕಾಮಗಾರಿ ಕೇವಲ ಒಂದು ತಿಂಗಳಲ್ಲಿ ವಾಹನ ಸವಾರರ ಬಳಕೆಗೆ ಲಭ್ಯವಾಗಿದೆ.

ಗುಂಡಿಬಿದ್ದ ರಸ್ತೆ ಸರಿಪಡಿಸಿ: ಎರಡೂ ವೃತ್ತದ ಕೆಲಸ ಸಾಗಿದ ರೀತಿಯಲ್ಲಿ ಆದಷ್ಟು ಬೇಗ ನಗರದ ರಸ್ತೆಗಳ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿರುವ ಸಾರ್ವಜನಿಕರು, ಈಗಾಗಲೇ ಮಳೆ ಆರಂಭವಾಗಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ. ಕೇಳಿದರೆ ಮಳೆ ನೆಪವೊಡ್ಡುತ್ತಿದ್ದಾರೆ. ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದ್ದು, ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ಎಲ್ಲೆಲ್ಲಿ ರಸ್ತೆ ಸಮಸ್ಯೆ: ನಗರದ ಓಂಕಾರೇಶ್ವರ ದೇವಾಲಯ ರಸ್ತೆ, ಕಾನ್ವೆಂಟ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಹೊಸ ಬಡಾವಣೆ, ರಾಣಿಪೇಟೆ, ಚಾಮುಂಡೇಶ್ವರಿ ನಗರ, ರಾಣಿಪೇಟೆ, ರೇಸ್ ಕೋರ್ಸ್ ರಸ್ತೆ, ಕಾನ್ವೆಂಟ್ ಜಂಕ್ಷನ್, ದೇಚೂರು ರಸ್ತೆ, ಪೆನ್ಷನ್ ಲೈನ್ ರಸ್ತೆ, ಗಣಪತಿ ಬೀದಿಯ ರಸ್ತೆ, ಗೌಳಿಬೀದಿ, ಕೊಹಿನೂರು ರಸ್ತೆ.. ಹೀಗೆ ಸಾಕಷ್ಟು ರಸ್ತೆಗಳು ಹಾಳಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ಸದ್ಯಕ್ಕಿಲ್ಲ ಟೆಂಡರ್: ನಗರ ಸ್ಥಳೀಯ ಸಂಸ್ಥೆಗಳ ನಗರೋತ್ಥಾನ 3ನೇ ಹಂತದ ಕ್ರಿಯಾಯೋಜನೆಯಡಿಯಲ್ಲಿ ನಗರದ ವಿವಿಧೆಡೆ ರಸ್ತೆ ದುರಸ್ತಿ, ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿ ಆರಂಭಿಸಲು ನಗರಸಭೆ ಯೋಜನೆ ರೂಪಿಸಿತ್ತು. ಆದರೆ, ಈಗಾಗಲೇ ಮಳೆ ಆರಂಭವಾದ ಪರಿಣಾಮ ಕಾಮಗಾರಿಗಳಿಗೆ ಸದಸ್ಯಕ್ಕೆ ಟೆಂಡರ್ ಕರೆಯುವ ಯೋಚನೆ ಇಲ್ಲದಾಗಿದೆ.