ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮ ಪ್ರವೇಶ ಮಾಡಿದ ಪಶ್ಚಿಮ ಬಂಗಾಳದ ರಾಕೇಶ್ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ತಡ ರಾತ್ರಿ ಗಸ್ತು ತಿರುಗುತ್ತಿದ್ದಾಗ ಹಳೇ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ರನ್ ವೇ ಕಾಮಗಾರಿ ನಡೆಯುತ್ತಿರುವಲ್ಲಿ ಅಪರಿಚಿತ ವ್ಯಕ್ತಿ ಕಂಡು ಬಂದಿದ್ದಾನೆ. ಆತನನ್ನು ಹಿಡಿದು ವಿಚಾರಿಸಿದಾಗ ತಾನು ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು ಲಾರಿಯಲ್ಲಿ ಕೆಲಸ ಮಾಡುತ್ತಿದ್ದು,ಚಾಲಕ ವೇತನ ನೀಡದೆ ಇಲ್ಲಿ ಬಿಟ್ಟು ಹೋಗಿದ್ದಾನೆ. ದಾರಿ ಕಾಣದೆ ವಿಮಾನ ನಿಲ್ದಾಣ ಎಂದು ತಿಳಿಯದೆ ಈ ಭಾಗಕ್ಕೆ ಬಂದಿರುವುದಾಗಿ ಹೇಳಿದ್ದಾನೆ. ಆರೋಪಿ ವಿರುದ್ದ ಸಿಐಎಸ್ಎಫ್ ನಿರೀಕ್ಷಕ ಪ್ರಮೋದ್ ಕುಮಾರ್ ಎಂಬವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.