ಜಿಲ್ಲೆ

ಮಂಗಳೂರು -ಲಕ್ಷದ್ವೀಪ ಸಂಬಂಧ ಗಾಢ: ಪ್ರತ್ಯೇಕ ಜೆಟ್ಟಿ ನಿರ್ಮಾಣ ಕಾರ್ಯ ಮಾತ್ರ ನನೆಗುದಿಗೆ

ಮಂಗಳೂರು: ಸದ್ಯ ರಾಜಕೀಯ ತಲ್ಲಣ ಎದುರಿಸುತ್ತಿರುವ ಲಕ್ಷದ್ವೀಪಕ್ಕೂ ಮಂಗಳೂರಿಗೂ ವ್ಯಾವಹಾರಿಕ ಸಂಬಂಧ ಹಿಂದಿನಿಂದಲೇ ಇದೆ. ವಹಿವಾಟು ಗಟ್ಟಿಗೊಳಿಸುವುದಕ್ಕಾಗಿಯೇ ಲಕ್ಷದ್ವೀಪ ಆಡಳಿತ ಮಂಗಳೂರು ಹಳೇ ಬಂದರಿನಲ್ಲೊಂದು ಪ್ರತ್ಯೇಕ ದಕ್ಕೆ ನಿರ್ಮಿಸುವ ಯೋಜನೆ ಹೊಂದಿದ್ದರೂ, ಅದು ಇದುವರೆಗೆ ಮುಂದುವರಿದಿಲ್ಲ.

ಮಲಯಾಳಂ ಭಾಷಿಗರಿರುವ ಮುಸ್ಲಿಂ ಸಮುದಾಯ ಹೆಚ್ಚಿರುವ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ. ಕೇರಳದ ಬಂದರುಗಳೊಂದಿಗೆ ಅದಕ್ಕೆ ಸಂಬಂಧ ಗಾಢ. ಮಂಗಳೂರಿನ ಬಂದರಿನಿಂದಲೂ ಹಲವು ದಶಕಗಳಿಂದ ಲಕ್ಷದ್ವೀಪಕ್ಕೆ ಅನೇಕ ರೀತಿಯ ವಸ್ತು ಸಾಗಾಟ ಮಾಡಲಾಗುತ್ತಿದೆ.

ಇದೇ ಕಾರಣಕ್ಕೆ 2011ರ ಸುಮಾರಿಗೇ ಮಂಗಳೂರು ಹಳೇ ಬಂದರಿನ ಉತ್ತರ ದಕ್ಕೆಯಲ್ಲೊಂದು ಪ್ರತ್ಯೇಕ ಬರ್ತ್ ಅನ್ನು ಲಕ್ಷದ್ವೀಪ ಆಡಳಿತ ವತಿಯಿಂದ ನಿರ್ಮಿಸುವುದಕ್ಕೆ ಯೋಜಿಸಲಾಗಿತ್ತು. ಮಂಗಳೂರು-ಲಕ್ಷದ್ವೀಪ ಮಧ್ಯೆ ವ್ಯವಹಾರ ಬಾಂಧವ್ಯ ವೃದ್ಧಿ ಇದರ ಉದ್ದೇಶವಾಗಿತ್ತು. ಸುಮಾರು 65 ಕೋಟಿ ರೂ. ವೆಚ್ಚದ ಈ ಯೋಜನೆಗೆ 8000 ಚದರ ಮೀಟರ್ ಜಾಗ ಒದಗಿಸುವುದು ರಾಜ್ಯ ಬಂದರು ಇಲಾಖೆಯಾದರೆ ಕಾಮಗಾರಿಯ ಖರ್ಚುವೆಚ್ಚಗಳನ್ನು ಲಕ್ಷದ್ವೀಪ ಆಡಳಿತ ನೋಡಿಕೊಳ್ಳಬೇಕಿತ್ತು.

ಪ್ರಯಾಣಿಕರ ವೈಟಿಂಗ್ ಕಾಂಪ್ಲೆಕ್ಸ್, ಗೂಡ್ಸ್ ಶೆಡ್ ನಿರ್ಮಾಣ ಮತ್ತಿತರ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ. ಯೋಜನೆ ಅನುಷ್ಠಾನಕ್ಕೆ ಉಭಯ ಆಡಳಿತಗಳಿಂದಲೂ ಹೆಚ್ಚಿನ ಅಸ್ಥೆ ಸಿಗಲಿಲ್ಲ. 2015ರಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಬಿಟ್ಟರೆ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

 ರಫ್ತು ಮಾತ್ರ, ಆಮದಿಲ್ಲ: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರತಿವರ್ಷ ಸೆ.15ರಿಂದ ಮೇ 15ರವರೆಗೆ ಮಾತ್ರ (ಮೇ 16ರಿಂದ ಸೆ.14ರವರೆಗೆ ನಿಷೇಧ) ಸರಕು ಸಾಗಾಟಕ್ಕೆ ನಿಯಮಾವಳಿ ಪ್ರಕಾರ ಅವಕಾಶವಿದೆ. ಮಂಗಳೂರಿನಿಂದ ಮಂಜಿ ಎಂದು ಕರೆಯಲ್ಪಡುವ ಚಿಕ್ಕ ಹಡಗುಗಳಲ್ಲಿ ಲಕ್ಷದ್ವೀಪಕ್ಕೆ ರೇಷನ್ ಅಕ್ಕಿ, ಆಹಾರ ವಸ್ತುಗಳು, ತರಕಾರಿ, ಕಲ್ಲು, ಮಣ್ಣು, ಗ್ರಾನೈಟ್, ಜಲ್ಲಿ, ಸಿಮೆಂಟ್, ಇಟ್ಟಿಗೆ, ಬ್ಲಾಕ್, ಸ್ಟೀಲ್ ಸಾಗಾಟ ಮಾಡಲಾಗುತ್ತದೆ. ಮಂಗಳೂರಿನಿಂದ ಸುಮಾರು 365 ಕಿ.ಮೀ ದೂರದಲ್ಲಿ ಲಕ್ಷದ್ವೀಪ ಸಮೂಹ ಇದೆ. ಮಂಜಿಯಲ್ಲಿ 24 ತಾಸು ಪ್ರಯಾಣಿಸಿದರೆ ಲಕ್ಷದ್ವೀಪದ ಮೊದಲ ದ್ವೀಪ ತಲುಪಬಹುದು. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಲು ಸುಮಾರು 24 ನೌಕೆಗಳಿವೆ.

ಲಕ್ಷದ್ವೀಪಕ್ಕೆ ಸರಕು, ಪ್ರಯಾಣಿಕರು: ಮಂಗಳೂರಿನಿಂದ ಲಕ್ಷದ್ವೀಪಕ್ಕೆ 2018-19ರಲ್ಲಿ 95,500 ಟನ್, 2019-20ರಲ್ಲಿ 73,800 ಟನ್ ಹಾಗೂ 2020-21ರಲ್ಲಿ(ಮೇ ವರೆಗೆ) 35,000 ಟನ್ ಸರಕು ರಫ್ತು ಮಾಡಲಾಗಿದೆ. ಅದೇ ರೀತಿ 2018-19ರಲ್ಲಿ 4955 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿ, 7422 ಮಂದಿ ತೆರಳಿದ್ದಾರೆ. 2019-20ರಲ್ಲಿ 3779 ಮಂದಿ ನಿರ್ಗಮನ, 2294 ಮಂದಿ ಆಗಮನ, 2020-21ರಲ್ಲಿ 561 ಮಂದಿ ನಿರ್ಗಮನ, 19 ಮಂದಿ ಆಗಮನ ದಾಖಲಾಗಿದೆ.

ಕೋವಿಡ್‌ನಿಂದಾಗಿ ಕಳೆದ ವರ್ಷ ಡಿ.28ರ ನಂತರವಷ್ಟೇ ಲಕ್ಷದ್ವೀಪ ಆಡಳಿತ ಸರಕು ಆಮದು ಮಾಡುವುದಕ್ಕೆ ಮುಂದಾಯಿತು. ಹಾಗಾಗಿ ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗೆ ಮೂರು ತಿಂಗಳ ಕಾಲ ಆಮದು ಆಗದ ಕಾರಣ ಒಂದಷ್ಟು ರಫ್ತು ಕುಸಿತ ಆಗಿದೆ.

ಕೇರಳ ಜತೆ ನಿಕಟ ಸಂಬಂಧ: ಲಕ್ಷದ್ವೀಪ- ಕೇರಳ ನಡುವೆ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ನಿಕಟ ಸಂಬಂಧವಿದೆ. ಸಂಸ್ಕೃತಿ, ಭಾಷೆ, ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ, ನ್ಯಾಯಾಲಯ ಎಲ್ಲದರಲ್ಲೂ ಹತ್ತಿರದ ನಂಟು. ಕೇರಳದಿಂದ 200-300 ಕಿ.ಮೀ. ಕ್ರಮಿಸಿದರೆ ಲಕ್ಷದ್ವೀಪ ತಲುಪಬಹುದು. ಕಲ್ಲಿಕೋಟೆಯ ಬೇಪೂರ್‌ನಿಂದ ಸಣ್ಣ ಹಡಗುಗಳಲ್ಲಿ ಅತಿ ಹೆಚ್ಚು ಸರಕು ಸಾಗಾಟ ನಡೆಯುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಆಗಮನ-ನಿರ್ಗಮನವೂ ಅಧಿಕ. ಮಳೆಗಾಲದ ಮೂರು ತಿಂಗಳು ಈ ಮಾರ್ಗದಲ್ಲೂ ನಿಷೇಧ ಇರುತ್ತದೆ. ಆದರೆ ಕೊಚ್ಚಿ ಬಂದರಿನಿಂದ ದೊಡ್ಡ ಹಡಗುಗಳಲ್ಲಿ ಸರಕು ಸಾಗಾಟ, ಪ್ರಯಾಣಿಕರ ಸಂಚಾರಕ್ಕೆ ಮಳೆಗಾಲದಲ್ಲೂ ಸೀಮಿತ ಅವಕಾಶ ಇದೆ.