ಜಿಲ್ಲೆ

ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಇಲ್ಲ: ಬೊಮ್ಮಾಯಿ

ಹಳೇಬೀಡು: ಭಯೋತ್ಪಾದನೆ ನಿಗ್ರಹಕ್ಕೆ ದಕ್ಷಿಣ ಭಾರತ ಎಲ್ಲ ರಾಜ್ಯಗಳು ಗುಪ್ತಚರ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವಂತೆ ವ್ಯವಸ್ಥೆ ರೂಪಿಸಿಕೊಳ್ಳಲು ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಇಲ್ಲಿನ ಪುಷ್ಪಗಿರಿ ಬೆಟ್ಟದಲ್ಲಿ ನಡೆದ ಮಲ್ಲಿಕಾರ್ಜುನಸ್ವಾಮಿ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ಹರಿಹರದಿಂದ ಹೆಲಿಕಾಪ್ಟರ್‌ನಲ್ಲಿ ಬುಧವಾರ ಸಂಜೆ ಹಳೇಬೀಡಿಗೆ ಆಗಮಿಸಿದ ಸಂದರ್ಭದಲ್ಲಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ಸ್ಲೀಪರ್ ಸೆಲ್‌ಗಳು ಎಲ್ಲ ರಾಜ್ಯಗಳಲ್ಲಿವೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಈ ಸ್ಲೀಪರ್ ಸೆಲ್‌ಗಳು ಸಂಚರಿಸುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಆದ್ದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಪರಸ್ಪರ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ವ್ಯವಸ್ಥೆ ರೂಪಿಸಿಕೊಂಡರೆ ಪರಿಣಾಮಕಾರಿ ಆಗಿ ಉಗ್ರ ಚಟುವಟಿಕೆಗಳನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.


ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಇಲ್ಲ. ಎಲ್ಲ ಸರ್ಕಾರಗಳ ಕಾಲದಲ್ಲೂ ಇಂತಹ ಘಟನೆಗಳು ನಡೆದಿವೆ. ಅದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೂ ಗೊತ್ತು. ರಾಜಕೀಯ ಕಾರಣಕ್ಕಾಗಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.


ಉಗ್ರಗಾಮಿಗಳ ಚಟುವಟಿಕೆ ಒಂದು ರಾಜ್ಯಕ್ಕೆ ಸೀಮಿತವಾದ ವಿಷಯವಲ್ಲ. ಇದು ಅಂತರರಾಷ್ಟ್ರೀಯ ಸಮಸ್ಯೆ. ನರೇಂದ್ರ ಮೋದಿಯವರು ಪ್ರಧಾನಿ ಆದ ನಂತರ ದೇಶದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕಲಾಗುತ್ತಿದೆ. ಆದರೂ ಅಲ್ಲಲ್ಲಿ ಸ್ಲೀಪರ್ ಸೆಲ್‌ಗಳು ಅಂತರರಾಷ್ಟ್ರೀಯ ನೆರವಿನಿಂದ ಆಗಿಂದಾಗ್ಗೆ ಕ್ರಿಯಾಶೀಲವಾಗುತ್ತವೆ. ಆದರೆ ರಾಜ್ಯ ಸರ್ಕಾರ ಇಂತಹ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ತಾವು ಹಿಂದೆ ಗೃಹ ಮಂತ್ರಿ ಆಗಿದ್ದಾಗಲೇ ಇಂತಹ 18 ಸ್ಲೀಪರ್ ಸೆಲ್‌ಗಳನ್ನು ಗುರುತಿಸಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಅಂತಹ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದರು.

ಕಾಡಾನೆ ಸಮಸ್ಯೆಗೆ ಪರಿಹಾರ:
ಕಾಡಾನೆ ಹಾವಳಿ ಮತ್ತು ಆನೆ-ಮಾನವ ಸಂಘರ್ಷ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮಸ್ಯೆ ಎದುರಾದಾಗ ಮಾತ್ರ ಕಾರ್ಯಾಚರಣೆ ನಡೆಸದೆ ಸದಾ ಜಾಗೃತವಾಗಿರಬೇಕು ಎಂಬ ಉದ್ದೇಶದಿಂದ ಸಮಸ್ಯೆ ಇರುವ ನಾಲ್ಕು ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.


ಈ ವಿಶೇಷ ಕಾರ್ಯಪಡೆಗೆ ಹೆಚ್ಚಿನ ಸಿಬ್ಬಂದಿ, ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡಲಾಗುವುದು. ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗುವುದು. ಆನೆಗಳು ಬೀಡುಬಿಟ್ಟಿರುವ ಸ್ಥಳದಲ್ಲಿ ಈ ವಿಶೇಷ ಕಾರ್ಯಪಡೆಯೂ ನೆಲೆಸಿ ಆನೆಗಳಿಂದ ಮಾನವ ಪ್ರಾಣ ಹಾನಿ ಆಗದಂತೆ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಮಾಡಲಿದೆ. ಆನೆಗಳು ಸಂಚರಿಸುವ ಮಾರ್ಗದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡುವ ಕೆಲಸ ನಿರ್ವಹಿಸಲಿದೆ ಎಂದರು.


ಆನೆಗಳು ಕಾಡಿನಿಂದ ಜನವಸತಿ ಮತ್ತು ಹೊಲ, ಗದ್ದೆ, ತೋಟಗಳಿಗೆ ಬರದಂತೆ ರೈಲುಹಳಿಗಳ ತಡೆಗೋಡೆ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಹಣದ ಕೊರತೆ ಇಲ್ಲ. ಅಲ್ಲದೆ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮೃತರ ಕುಟಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.